×
Ad

ಜಿಲ್ಲಾಡಳಿತದಿಂದ ಭಗೀರಥ ಜಯಂತಿ ಆಚರಣೆ

Update: 2017-05-06 15:58 IST

ಮಂಗಳೂರು, ಮೇ 6: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀನಿವಾಸ ವಿಶ್ವವಿದ್ಯಾನಿಲಯ ಪಾಂಡೇಶ್ವರ ಹಾಗೂ ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶನಿವಾರ ಮಂಗಳೂರಿನ ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನ ಸಭಾಂಗಣದಲ್ಲಿ ಭಗೀರಥ ಜಯಂತಿ ಕಾರ್ಯಕ್ರಮ ನಡೆಯಿತು.

ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ, ಸತತ ಪ್ರಯತ್ನದಿಂದ ಯಶಸ್ಸನ್ನು ಸಾಧಿಸಬಹುದು ಎಂಬುದಕ್ಕೆ ಮಹಾತಪಸ್ವಿ ಭಗೀರಥನೇ ಸಾಕ್ಷಿ. ನಾವೂ ಕೂಡ ಯಶಸ್ಸಿನ ಗುರಿ ತಲುಪಬೇಕಾದರೆ ಉತ್ತಮ ಪ್ರಯತ್ನ ಪಡಬೇಕು ಎಂದರು.

ಸ್ವಾರ್ಥವನ್ನಿಟ್ಟುಕೊಳ್ಳದೆ ಸಮಾಜದ ಅಭಿವೃದ್ಧಿಯ ದಿಸೆಯಲ್ಲಿ ಕೂಡ ನಮ್ಮ ಚಿಂತನೆ ಹರಿಯಬೇಕು. ಅಸಾಧ್ಯವಾದುದನ್ನು ಸಾಧಿಸಿದ ಭಗೀರಥನ ಪ್ರಯತ್ನದಂತೆ ನಮ್ಮ ಬದುಕಿನಲ್ಲೂ ಒಳ್ಳೆಯ ಪ್ರಯತ್ನ ಅಗತ್ಯ ಎಂದವರು ಹೇಳಿದರು.

ಭಗೀರಥ ಜಯಂತಿ ಆಚರಣೆಯ ಕುರಿತಂತೆ ಉಪನ್ಯಾಸಕ, ಯಕ್ಷಗಾನ ಅರ್ಥಧಾರಿ ವಾದಿರಾಜ ಕಲ್ಲೂರಾಯ ಉಪನ್ಯಾಸ ನೀಡಿ, ನಮ್ಮಲ್ಲಿನ ಅರಿಷಡ್ವರ್ಗಗಳನ್ನು ಗೆದ್ದರೆ ಯಶಸ್ಸನ್ನು ಕಾಣಲು ಸಾಧ್ಯವಿದೆ ಎಂದರು. ನೀರನ್ನು ತನ್ನಷ್ಟಕ್ಕೆ ಹರಿಯಬಿಡಬೇಕು. ಅದನ್ನು ತಿರುಗಿಸುವ ಪ್ರಯತ್ನ ಮಾಡಿದರೆ ದೊಡ್ಡ ಆಪತ್ತು ತಪ್ಪಿದ್ದಲ್ಲ. ಹಾವು ಕಚ್ಚಿದರೆ ಮದ್ದು ಇದೆ. ಆದರೆ ನೀರು ಮತ್ತು ಭೂಮಿ ತಿರುಗಿ ಬಿದ್ದರೆ ಯಾವ ಮದ್ದೂ ಇಲ್ಲ ಎಂದು ಎತ್ತಿನಹೊಳೆ ಯೋಜನೆಯಿಂದಾಗುವ ಅಪಾಯವನ್ನು ಅವರು ಯೋಜನೆಯ ಹೆಸರು ಹೇಳದೆ ಪರೋಕ್ಷವಾಗಿ ಅಪಾಯವನ್ನು ಬೊಟ್ಟು ಮಾಡಿದರು.

 ಮಂಗಳೂರು ತಹಶೀಲ್ದಾರ್ ಸಿ.ಮಹಾದೇವಯ್ಯ, ಮಂಗಳೂರು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಸಚಿವ ಪಿ.ಎಸ್.ಐತಾಳ್, ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಜಯಶ್ರೀ ಕೆ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಸ್ವಾಗತಿಸಿದರು. ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News