ಗೋಹತ್ಯೆ ಆರೋಪದಲ್ಲಿ ಬಂಧಿತ ದಲಿತ ಕಸ್ಟಡಿಯಲ್ಲಿ ಸಾವು
ಅಹ್ಮದಾಬಾದ್, ಮೇ 6: ಜಾನುವಾರುಗಳನ್ನು ವಧಿಸುತ್ತಿದ್ದ ಆರೋಪದಡಿ, ಹೊಸದಾಗಿ ಜಾರಿಗೊಳಿಸಲಾದ ಹಸು ಸಂರಕ್ಷಣಾ ಕಾಯ್ದೆಯಡಿ ಬಂಧಿಸಲಾಗಿದ್ದ ಬುಡಕಟ್ಟು ಪಂಗಡದ ವ್ಯಕ್ತಿಯೋರ್ವ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಗುಜರಾತ್ ಸರಕಾರ ಆದೇಶಿಸಿದೆ.
ಆದರೆ ಪೊಲೀಸ್ ಕಸ್ಟಡಿಯಲ್ಲಿ ಸಾವು ಸಂಭವಿಸಿದೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ಹಸುಗಳನ್ನು ವಧೆ ಮಾಡಿದ ಆರೋಪದಡಿ ಕೋದಾರ್ ಗಮರ್ , ಆತನ ಪುತ್ರ ಹಾಗೂ ಇತರ ಮೂವರ ವಿರುದ್ಧ ಸಬರ್‌ಕಾಂತ ಗ್ರಾಮದ ಖೆರೋಜ್ ಪೊಲೀಸ್ ಠಾಣೆಯಲ್ಲಿ ಎಪ್ರಿಲ್ 26ರಂದು ದೂರು ದಾಖಲಾಗಿತ್ತು. ಮೇ 2ರಂದು ಗಮರ್ ಮತ್ತು ಇತರ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಮೇ 3ರಂದು ಸಂಜೆ ಸ್ನಾನ ಮುಗಿಸಿ ಬಂದ ಗಮರ್ ಕುಸಿದು ಬಿದ್ದಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಸ್ನಾನ ಮುಗಿಸಿ ಬಂದ ಬಳಿಕ ಗಮರ್ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಸಿಸಿ ಟಿವಿ ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂಬುದು ಪೊಲೀಸರ ಹೇಳಿಕೆ. ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತನ ಆರೋಗ್ಯ ಸ್ಥಿತಿ ಬಿಗಡಾಯಿಸತೊಡಗಿದಾಗ ಖೇದ್‌ಬ್ರಹ್ಮ ಆಸ್ಪತ್ರೆಗೆ ಮತ್ತು ಅಲ್ಲಿಂದ ಅಹ್ಮದಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಆತ ಮೃತಪಟ್ಟಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ.