ಯುವ ಪೀಳಿಗೆ ತುಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು: ಡಾ.ಗಣನಾಥ ಎಕ್ಕಾರು
ಉಡುಪಿ, ಮೇ 6: ಇಂದಿನ ಯುವ ಪೀಳಿಗೆ ಗಂಭೀರ ಸಂಶೋಧನೆಯತ್ತ ಗಮನ ಹರಿಸುತ್ತಿಲ್ಲ. ಕರಾವಳಿಯದ್ದೇ ಆದ ಮಂಗಳೂರು ವಿವಿ ತುಳು ಸೇರಿದಂತೆ ಪ್ರಾದೇಶಿಕ ಭಾಷೆಗಳಾದ ಕೊಂಕಣಿ, ಬ್ಯಾರಿ ಭಾಷೆಗೆ ವಿಶೇಷ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ತುಳು ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ತುಳು ವಿದ್ವಾಂಸ, ಎನ್ನೆಸ್ಸೆಸ್ ರಾಜ್ಯ ಸಂಚಾಲಕ ಹಾಗೂ ಪ್ರಾಧ್ಯಾಪಕರಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಹೇಳಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ವಿವಿಯ ವತಿಯಿಂದ ಖ್ಯಾತ ಸಂಶೋಧಕಿ, ಲೇಖಕಿ ಡಾ.ಇಂದಿರಾ ಹೆಗ್ಡೆ ಅವರಿಗೆ ಪೊಳಲಿ ಶೀನಪ್ಪ ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ತುಳು ಸಂಶೋಧನೆ - ಇತ್ತೀಚಿನ ಒಲವುಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಮಂಗಳೂರು ವಿವಿ ಸ್ಥಳೀಯ ಪ್ರಾದೇಶಿಕ ಭಾಷೆಗಳ ಸಂಶೋಧನೆಯತ್ತ ಹೆಚ್ಚಿನ ಗಮನಹರಿಸಬೇಕು. ಆದರೆ ಅದು ಹಲವು ದಶಕಗಳಿಂದ ಈ ಬಗ್ಗೆ ಯಾವುದೇ ಕೆಲಸ ಮಾಡಿಲ್ಲ. ಈಗಷ್ಟೇ ತುಳು ಪೀಠ ಸ್ಥಾಪನೆಗೆ ಅದು ಚಿಂತನೆ ನಡೆಸುತ್ತಿದೆ ಎಂದು ಡಾ.ಎಕ್ಕಾರು ತಿಳಿಸಿದರು.
ತುಳು ಸಂಶೋಧನೆಯನ್ನು ಮೂರು ಸ್ತರಗಳಲ್ಲಿ ಗುರುತಿಸಬಹುದು ಎಂದು ಹೇಳಿದ ಡಾ.ಎಕ್ಕಾರು, ಮೊದಲ ಹಂತದಲ್ಲಿ 1880ರಿಂದ 1900ರವರೆಗೆ ಕರಾವಳಿಗೆ ಬಂದ ವಿದೇಶಿ ವಿದ್ವಾಂಸರು ಸಂಶೋಧನೆಯ ದಾರಿಯನ್ನು ದೇಸಿಯ ವಿದ್ವಾಂಸರಿಗೆ ತೋರಿಸಿಕೊಟ್ಟರು. ಎರಡನೇ ಹಂತದಲ್ಲಿ ಇದರಿಂದ ಸ್ಪೂರ್ತಿ ಪಡೆದ ದೇಸಿಯ ವಿದ್ವಾಂಸರು ಸಂಶೋಧನೆಯನ್ನು ಮುಂದುವರಿಸಿದರು. ಮೂರನೇ ಹಂತದಲ್ಲಿ 1990ರ ಬಳಿಕ ಹಿರಿಯ-ಕಿರಿಯ ವಿದ್ವಾಂಸರು ಜೊತೆಯಾಗಿ ತಾತ್ವಿಕ, ವೈಜ್ಞಾನಿಕ ಸಂಶೋಧನೆಗೆ ತೆರೆದುಕೊಂಡರು ಎಂದವರು ವಿವರಿಸಿದರು.
ತುಳುವಿನಲ್ಲಿ ಪಾಡ್ದನದಂತ ಅಪಾರವಾದ ಜಾನಪದ ಸಂಪತ್ತಿದೆ. ಆರಂಭಿಕ ಹಂತದಲ್ಲಿ ವಿದೇಶಿ ವಿದ್ವಾಂಸರು ಇವುಗಳ ಕುರಿತಂತೆ ಹೆಚ್ಚಿನ ಸಂಶೋಧನೆ ನಡೆಸಿದರು. ತುಳುನಾಡು, ತುಳುಭಾಷೆ ಹಾಗೂ ತುಳುವ ಸಂಸ್ಕೃತಿಯ ಶ್ರೇಷ್ಠತೆಯನ್ನು ಇವರು ಎತ್ತಿ ತೋರಿಸಿದರು. ತುಳುವಿನ ಕುರಿತಂತೆ ಇದ್ದ ಕೀಳರಿಮೆ ಇದರಿಂದ ದೂರವಾಗತೊಡಗಿತು ಎಂದರು.
ತುಳು ಸಂಶೋಧನೆಯಲ್ಲಿ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಆರ್.ಆರ್.ಸಿಯ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಈ ದಿಸೆಯಲ್ಲಿ ಪ್ರೊ.ಕು.ಶಿ.ಹರಿದಾಸ ಭಟ್ಟರ ಕೊಡುಗೆ ಮರೆಯಲಸಾಧ್ಯ. ಈ ಎರಡು ಸಂಸ್ಥೆಗಳು ಮತ್ತೆ ಸಂಶೋಧನೆಗೆ ಹೆಚ್ಚಿನ ಗಮನ ಹರಿಸಬೇಕು. ಯುವ ಪೀಳಿಗೆ ತುಳುವಿನ ಬಗ್ಗೆ ಗಂಭೀರ ಸಂಶೋಧನೆ ನಡೆಸಲು ಆಸಕ್ತಿ ತೋರಿಸಬೇಕಿದ್ದು, ಅವರಿಗೆ ವಿದ್ವಾಂಸರು ಮಾರ್ಗದರ್ಶನ ನೀಡಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಂದಿರಾ ಹೆಗ್ಡೆ, ಡಾ.ಚಿದಾನಂದ ಮೂರ್ತಿ ಅವರ ಒತ್ತಾಸೆಯಿಂದ ತಾನು ಸಂಶೋಧನಾ ಕ್ಷೇತ್ರಕ್ಕೆ ಕಾಲಿರಿಸಿದರೂ ಇಲ್ಲಿ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ ಎಂದರಲ್ಲದೇ, ಕ್ಷೇತ್ರ ಸಮೀಕ್ಷೆಯ ಸಂದರ್ಭದಲ್ಲಿ ತನ್ನ ಹಲವು ಸ್ವಾರಸ್ಯಕರ ಅನುಭವವನ್ನು ಅವರು ಹಂಚಿಕೊಂಡರು.
ಉಡುಪಿಯ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತುಳು ವಿದ್ವಾಂಸ, ಪತ್ರಕರ್ತ ಕೆ.ಎಲ್.ಕುಂಡಂತಾಯ ಅಭಿನಂದನಾ ಭಾಷಣ ಮಾಡಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಅಶೋಕ ಆಳ್ವ ವಂದಿಸಿ, ಡಾ.ಜ್ಯೋತಿ ಚೇಳಾರು ಕಾರ್ಯಕ್ರಮ ನಿರ್ವಹಿಸಿದರು.