ತುಳು ಭಾಷೆಯ ಬೆಳವಣಿಗೆಗೆ ಆಧುನಿಕ ಮಾಹಿತಿ ತಂತ್ರಜ್ಞಾನದ ಬಳಕೆ ಅಗತ್ಯ: ಡಾ.ಬಿ.ಎ.ವಿವೇಕ್ ರೈ
ಮಂಗಳೂರು, ಮೇ 6: ತುಳುವರ ಕೃತಿಯಲ್ಲಿ ತುಳುನಾಡಿನ ಸಮನ್ವಯತೆಯ ಚಿತ್ರಣವಿದೆ. ಈ ಹಿನ್ನೆಲೆಯಲ್ಲಿ ಭಾಷೆಯ ವಿಸ್ತರಣೆಗೆ, ತುಳು ಕೃತಿಗಳ ಭಾಷಾಂತರ, ಆಧುನಿಕ ಮಾಹಿತಿ ತಂತ್ರಜ್ಞಾನದ ಬಳಕೆಯ ಅಗತ್ಯವಿದೆ ಎಂದು ಹಂಪಿ ಹಾಗೂ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ತಿಳಿಸಿದರು.
ಮಂಗಳೂರು ಆಕಾಶವಾಣಿಯ ಬಾನುಲಿ ಸ್ವರ ಮಂಟಮೆ 6ನೆ ಸಂಚಿಕೆಯಲ್ಲಿ ‘ಲಾಡೆಲ್ -ಇನ್-ಎ ಗೋಲ್ಡನ್ ಬೌಲ್’ ಎಂಬ ತುಳು ಕವಿತೆಗಳ ಇಂಗ್ಲೀಷ್ ಭಾಷಾಂತರ ಕೃತಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಈ ಕೃತಿಯಲ್ಲಿ ತುಳುನಾಡಿನ ಹಿರಿಯ ಮತ್ತು ಕಿರಿಯ 69 ಕವಿಗಳ 114 ತುಳು ಕವಿತೆಗಳನ್ನು ವಿದ್ವಾಂಸರಾದ ಪ್ರೊ.ಸುರೇಂದ್ರ ರಾವ್ ಮತ್ತು ಡಾ.ಕೆ.ಚಿನ್ನಪ್ಪ ಗೌಡ ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ತುಳುನಾಡಿನ ಸುಮಾರು ಮೂರು ತಲೆಮಾರಿನ ಚರಿತ್ರೆ ಹಾಗೂ ವಿವರಗಳನ್ನು ಈ ಕೃತಿಯ ಮೂಲಕ ತಿಳಿದುಕೊಳ್ಳಬಹುದು. ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ , ಜಾತಿ, ಣ್ಣು-ಗಂಡಿನ ಸಂಬಂಧಗಳ ಬಗ್ಗೆ ಕವಿತೆಗಳಿವೆ. ತುಳು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ತರ್ಜಮೆ ಮಾಡುವುದು ಒಂದು ಸವಾಲಿನ ಕೆಲಸವಾದರೂ ಈ ರೀತಿಯ ಒಂದು ಪ್ರಯತ್ನದಿಂದ ದೇಶ ವಿದೇಶದ ವಿವಿಧ ಕಡೆಗಳಲ್ಲಿ ವಾಸವಾಗಿರುವ ಕನ್ನಡ ಲಿಪಿಯನ್ನು ತಿಳಿಯದೆ ಇರುವ ತುಳುವರಿಗೆ ಹಾಗೂ ಇತರರಿಗೂ ತುಳು ಕವಿತೆಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಡಾ.ವಿವೇಕ್ ರೈ ತಿಳಿಸಿದರು.
ಬಾನುಲಿ ಸ್ವರ ಮಂಟಮೆಯ 6ನೆ ಸಂಚಿಕೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸಿ.ಡಿ ಬಿಡುಗಡೆ ಮಾಡುವವರು, ಪುಸ್ತಕ ಬಿಡುಗಡೆ ಮಾಡುವವರ ಜೊತೆ ಕೇಳುಗರು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ ಎಂದು ಆಕಾಶವಾಣಿಯ ನಿಲಯದ ಉಪ ನಿರ್ದೇಶಕಿ ಉಷಾಲತಾ ತಿಳಿಸಿದ್ದಾರೆ.
ಸಮಾರಂಭದಲ್ಲಿ ತುಳು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಪ್ರೊ.ಬಿ.ಸುರೇಂದ್ರ ರಾವ್, ಡಾ.ಕೆ.ಚಿನ್ನಪ್ಪ ಗೌಡ, ಕವಿಗಳಾದ ಡಾ.ವಾಮನ ನಂದಾವರ, ಭಾಸ್ಕರ ರೈ ಕುಕ್ಕುವಳ್ಳಿ, ಶಶಿರಾಜ್ ಕಾವೂರ್, ಅಕ್ಷಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಆಕಾಶವಾಣಿ ನಿಲಯದ ಉಪ ನಿರ್ದೇಶಕರಾದ ಎಸ್.ಉಷಾಲತಾ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಡಾ.ಸದಾನಂದ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಕೃತಿಯ ಪ್ರಕಾಶಕರಾದ ನಾಗೇಶ್ ಕಲ್ಲೂರು ಕೃತಿಯ ಪ್ರಕಟನೆಯ ಬಗ್ಗೆ ಮಾಹಿತಿ ನೀಡಿದರು. ಪ್ರವೀಣ್ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.