ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಇಲ್ಲ

Update: 2017-05-06 18:14 GMT
  • ಪುತ್ತೂರು ತಾಲೂಕು ವೈದ್ಯಾಧಿಕಾರಿಗೆ ಶಾಸಕಿ ತರಾಟೆ

ಉಪ್ಪಿನಂಗಡಿ, ಮೇ 6: ಪುತ್ತೂರು ತಾಲೂಕಿನಲ್ಲಿ ಇಲಿ ಜ್ವರ ಪ್ರಕರಣ ದಾಖಲಾಗಿರುವ ಬಗ್ಗೆ ಸಾರ್ವಜನಿಕರು ಗಮನಸೆಳೆದಾಗ ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಇಲ್ಲದಿರುವ ಬಗ್ಗೆ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಬೆಳಕಿಗೆ ಬಂತು. ಇಲ್ಲಿನ ಸಿಎ ಬ್ಯಾಂಕ್ ಸಭಾಂಗಣಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಉಪ್ಪಿನಂಗಡಿ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಈ ಪ್ರಸಂಗ ನಡೆಯಿತು.

ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಾರ್ವಜನಿಕರು, ಪುತ್ತೂರು ತಾಲೂಕಿನಲ್ಲಿ ಇಲಿ ಜ್ವರ ಪ್ರಕರಣ ಪತ್ತೆಯಾಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಆರೋಗ್ಯ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಉತ್ತರಿಸಿ, ಖಾಸಗಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ನಡೆಸಿ ಅಲ್ಲಿ ಇಲಿ ಜ್ವರ ಪ್ರಕರಣ ದಾಖಲಾದರೆ ನಮಗೆ ಸಂಬಂಧವಿಲ್ಲ. ಇಲಿ ಜ್ವರ ಪ್ರಕರಣ ನಮ್ಮ ಗಮನಕ್ಕೆ ಬಂದಿಲ್ಲ ಎಂದರು. 

ಈ ಉತ್ತರದಿಂದ ಅಸಮಾಧಾನಗೊಂಡ ಶಾಸಕಿ ತಾಲೂಕು ಆರೋಗ್ಯಾಧಿಕಾರಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಇಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸಲು ಇಲಾಖೆಯ ಎಲ್ಲರಿಗೂ ಸೂಚಿಸು ವಂತೆ ಆದೇಶಿಸಿದರು.

ಅಪೂರ್ಣ ರಸ್ತೆ: ಉಪ್ಪಿನಂಗಡಿ- ಕಡಬ ರಾಜ್ಯ ಹೆದ್ದಾರಿಯಲ್ಲಿ ಹಳೆಗೇಟಿನಿಂದ ಕೊಯಿಲದ ತನಕ ಡಾಂಬರ್ ಕಾಮಗಾರಿ ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಉತ್ತಮ ಫಿನಿಶಿಂಗ್, ಚರಂಡಿ ನಿರ್ವಹಣೆ ಆಗಿಲ್ಲ ಎಂದು ಸಭೆಯಲ್ಲಿ ಸಾರ್ವಜನಿಕರು ಆರೋಪಿಸಿದರು.

ಈ ಸಂದಭರ್ ಪಿಡಬ್ಲೂಡಿ ಇಂಜಿನಿಯರ್ ಅವರಲ್ಲಿ ದೂರವಾಣಿ ಮೂಲಕ ಮಾತನಾಡಿದ ಶಾಸಕಿ ಈ ಬಗ್ಗೆ ಮಾಹಿತಿ ಪಡೆದರು. ಬಳಿಕ ಸೋಮವಾರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. 34ನೆ ನೆಕ್ಕಿಲಾಡಿ ಗ್ರಾಮ ದಲ್ಲಿ ಸರ್ವೇ ನಂಬರ್ 88/ 1ಪಿ1ನಲ್ಲಿರುವ 1.30 ಎಕರೆ ಸ್ಥಳವು ತನ್ನ ಪಟ್ಟಾ ಜಾಗದ ಕುಮ್ಕಿಯಾಗಿದ್ದು, ಇದನ್ನು ಅನು ಭವಿಸಲು ಅವಕಾಶ ನೀಡಬೇಕೆಂದು ಖಾಸಗಿ ವ್ಯಕ್ತಿಯೋರ್ವರು ಅರ್ಜಿ ನೀಡಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಕುಮ್ಕಿಯಾದರೆ ಅವರಿಗೆ ಬಿಟ್ಟುಕೊಡಿ. ಅದು ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಜಾಗವಾದರೆ ಅರಣ್ಯ ಇಲಾಖೆಗೆ ಬಿಟ್ಟುಕೊಡಿ ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಕೋಡಿಂಬಾಡಿ ಗ್ರಾಪಂನಲ್ಲಿ ಕಳೆದ ಬಾರಿ ನಡೆದ ಗ್ರಾಮ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳನ್ನು ತಿರುಚಲಾಗಿದೆ. ನಿರ್ಣಯದ ಪ್ರತಿಯನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಅದರಲ್ಲಿ ಗ್ರಾಮ ಸಭೆಯಲ್ಲಾದ ನಿರ್ಣಯ ತಿರುಚಿರುವುದು ಕಂಡು ಬಂದಿದೆ ಎಂದು ಸಭೆಯಲ್ಲಿ ಆರೋಪಿಸಲಾಯಿತು. ಇದಕ್ಕೆ ಸ್ಪಷ್ಟನೆ ನೀಡಿದ ತಾಪಂ ಸಿಇಒ ಜಗದೀಶ್, ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಗ್ರಾಮ ಸಭೆಯೆದುರು ಬರೆಯಲಾದ ನಿರ್ಣಯವೇ ಅಂತಿಮ. ನಿರ್ಣಯ ತಿದ್ದುಪಡಿ ಮಾಡಿರುವುದು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಿಸುವುದಾಗಿ ತಿಳಿಸಿದರು. ಈ ಸಂದರ್ಭ ಫಲಾನು ಭವಿಗಳಿಗೆ ಭಾಗ್ಯಲಕ್ಷಿ್ಮ ಬಾಂಡ್, ವಿಧವಾ ವೇತನ, 94ಸಿ ಹಕ್ಕುಪತ್ರ ಮುಂತಾದ ಯೋಜನೆಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ಜಿಪಂ ಸದಸ್ಯೆ ಶಯನಾ ಜಯಾನಂದ್, ತಾಪಂ ಸದಸ್ಯರಾದ ಸುಜಾತಾ ಕೃಷ್ಣ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಉಷಾ ಅಂಚನ್, ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್, ಬಜತ್ತೂರು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ, 34ನೆ ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷೆ ರತಿ ಎಸ್. ನಾಯ್ಕ, ಕೆಡಿಪಿ ಜಿಲ್ಲಾ ನಾಮನಿರ್ದೇಶಿತ ಸದಸ್ಯ ಅಯ್ಯೂಬ್, ತಹಶೀಲ್ದಾರ್ ಅನಂತಶಂಕರ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ಸ್ವಾಗತಿಸಿದರು. ಉಪ್ಪಿನಂಗಡಿ ಪ್ರಭಾರ ಗ್ರಾಮಕರಣಿಕ ಸುನೀಲ್ ವಿಟ್ಲ ವಂದಿಸಿದರು. ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಪ್ರಸನ್ನ ಕುಮಾರ್ ಪಕಳ, ಉಪತಹಶೀಲ್ದಾರ್ ಸದಾಶಿವ ನಾಯಕ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News