ರಾಜ್ಯ ಸರಕಾರ ಭ್ರಷ್ಟ ಎನ್ನುವ ನೈತಿಕತೆ ಬಿಜೆಪಿಗಿಲ್ಲ: ಕೆಪಿಸಿಸಿ ವಕ್ತಾರ ಸುದರ್ಶನ್
ಮಂಗಳೂರು, ಮೇ 7: ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಮಾಡಿರುವ ಭ್ರಷ್ಟಾಚಾರವನ್ನು ಜನ ಮರೆತಿಲ್ಲ. ಹಾಗಾಗಿ ರಾಜ್ಯ ಸರಕಾರ ಭ್ರಷ್ಟ ಎಂದು ಹೇಳುವ ನೈತಿಕತೆ ಬಿಜೆಪಿಗಿಲ್ಲ ಎಂದು ಕೆಪಿಸಿಸಿ ವಕ್ತಾರ ವಿ.ಆರ್. ಸುದರ್ಶನ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಗಳಿಸಲಿದೆ. ಇದಕ್ಕೆ ಇತ್ತೀಚೆಗೆ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಪಕ್ಷದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ನಿನ್ನೆ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುವ ದಿಕ್ಕುವ ತಪ್ಪಿಸುವ ಪ್ರಯತ್ನ ಮಾಡಿದೆ. ಆದರೆ ಕರ್ನಾಟಕ ಜನತೆಯನ್ನು ಮರುಳು ಮಾಡಲು ಸಾಧ್ಯವಿಲ್ಲ. ಬಿಜೆಪಿಯ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮೂರು ಮುಖ್ಯಮಂತ್ರಿಗಳು ಮಾಡಿರುವ ಭ್ರಷ್ಟಾಚಾರವನ್ನು ಮರೆಯುವಂತಿಲ್ಲ. ಈ ಬಗ್ಗೆ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಪ್ರತಿಪಕ್ಷವಾಗಿಯೂ ರಾಜ್ಯದಲ್ಲಿ ಬಿಜೆಪಿ ತನ್ನ ಜವಾಬ್ಧಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಹಾಗಿದ್ದರೂ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ರಾಜ್ಯ ಸರಕಾರದ ವಿರುದ್ಧ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರ ನಾಯಕತ್ವ ಇದ್ದೇ ಇರುತ್ತದೆ. ಮುಂದಿನ ಮುಖ್ಯಮಂತ್ರಿ ಕುರಿತಂತೆ ಹೊಸ ಶಾಸನ ಸಭೆಯಲ್ಲಿ ಆಯ್ಕೆ ನಡೆಯುವುದು. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಸುದರ್ಶನ್ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷದಿಂದ ಸದಸ್ಯತ್ವ ಅಭಿಯಾನ ಮೇ 15ಕ್ಕೆ ಕೊನೆಗೊಳ್ಳಲಿದೆ. ಹೊಸತಾಗಿ ಸೇರ್ಪಡೆಯಾದ, ಹಳೆ ನವೀಕರಣದ ಸಂಪೂರ್ಣ ವಿವರವನ್ನು ಕೆಪಿಸಿಸಿಗೆ ಕಳುಹಿಸಲು ಡಿಸಿಸಿಗೆ ತಿಳಿಸಲಾಗಿದೆ.ಆಗಸ್ಟ್ 6ರಂದು ಸದಸ್ಯರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. ಬಳಿಕ ಪ್ರಾಥಮಿಕ ಬೂತ್ ಕಮಿಟಿ, ಡಿಸಿಸಿ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗಳು ಹಂತ ಹಂತವಾಗಿ ನಡೆದು ಅಕ್ಟೋಬರ್ 15ರ ವೇಳೆಗೆ ಮುಕ್ತಾಯವಾಗಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಗೋಷ್ಠಿಯಲ್ಲಿ ಮೇಯರ್ ಕವಿತಾ ಸನಿಲ್, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಸೇವಾದಳದ ಜಿಲ್ಲಾಧ್ಯಕ್ಷ ಅಶ್ರಫ್, ಪಕ್ಷದ ದಲಿತ ವಿಭಾಗದ ಜಿಲ್ಲಾ ಅಧ್ಯಕ್ಷ ಪದ್ಮನಾಭ ನರಿಂಗಾನ, ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ. ವಿನಯರಾಜ್, ಜಿಲ್ಲಾ ಕಚೇರಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಉತ್ತರ ವಲಯ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.
ಸಿಎಂ ಇಬ್ರಾಹೀಂರಿಂದ ದೇವೇಗೌಡರ ಭೇಟಿಗೆ ರಾಜಕೀಯ ಅರ್ಥ ಬೇಡ
ಬಿ.ಎಲ್. ಶಂಕರ್ ಸೇರಿದಂತೆ ಯಾರೂ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿಲ್ಲ. ಅದೆಲ್ಲವೂ ಊಹಾಪೋಹವಷ್ಟೇ. ಸಿ.ಎಂ. ಇಬ್ರಾಹೀಂರವರು ಮಾಜಿ ಪ್ರಧಾನಿ ದೇವೇಗೌಡರನ್ನು ಹಳೆ ವಿಶ್ವಾಸ, ಸ್ನೇಹದಿಂದಾಗಿ ಅವರ ಆರೋಗ್ಯ ವಿಚಾರಣೆಗಾಗಿ ಭೇಟಿಯಾಗಿದ್ದಿರಬಹುದು. ಅದಕ್ಕೆ ರಾಜಕೀಯ ಅರ್ಥ ಬೇಡ ಎಂದು ಪ್ರಶ್ನೆಯೊಂದಕ್ಕೆ ಸುದರ್ಶನ್ ಉತ್ತರಿಸಿದರು