×
Ad

ತ್ಯಾಜ್ಯ ಸಂಸ್ಕರಣಾ ಘಟಕಗಳು ಇಲ್ಲದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲು: ಮೇಯರ್ ಕವಿತಾ

Update: 2017-05-07 12:46 IST

ಮಂಗಳೂರು, ಮೇ 7: ಕೈಗಾರಿಕೆಗಳು, ಬಹು ಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲೇ ಎಸ್‌ಟಿಪಿ (ತ್ಯಾಜ್ಯ ಸಂಸ್ಕರಣಾ ಘಟಕ)ಗಳ ವ್ಯವಸ್ಥೆ ಮಾಡದಿದ್ದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಮೂಲಕ ನಗರದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿ ಶನಿವಾರ ಮಹಾನಗರ ಪಾಲಿಕೆಗಳ ಮೇಯರ್‌ಗಳ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತಂತೆ ಅವರು ರವಿವಾರ ಸುದ್ದಿಗಾರರ ಜತೆ ಅಭಿಪ್ರಾಯ ಹಂಚಿಕೊಂಡರು.

ರಾಜ್ಯಾದ್ಯಂತ ಕೈಗಾರಿಕೆಗಳು ಸೇರಿದಂತೆ, ಬಹುಮಹಡಿ ಕಟ್ಟಡಗಳಲ್ಲಿ ಎಸ್‌ಟಿಪಿಗಳ ನಿರ್ಮಾಣವನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಮಾತ್ರವಲ್ಲದೆ, ಬೆಂಗಳೂರಿನಲ್ಲಿ 482 ಕೈಗಾರಿಗಳಿಗೆ ನೋಟಿಸ್ ನೀಡಲಾಗಿದೆ. 92 ಕೈಗಾರಿಕೆಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಬೀಗ ಜಡಿಯಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಈ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.

2016ರ ರಾಜ್ಯ ಸರಕಾರದ ಆದೇಶದ ಪ್ರಕಾರ ಕೈಗಾರಿಕೆಗಳು ಹಾಗೂ ಬಹು ಮಹಡಿ ಕಟ್ಟಡಗಳ ನಿರ್ಮಾಣದ ಸಂದರ್ಭ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣವನ್ನು ಕಡ್ಡಾಯಗೊಳಿಸಲಾಗಿತ್ತು. ಇದನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ. ನಗರದಲ್ಲಿ ಮುಂದಿನ ದಿನಗಳಲ್ಲಿ ಮುಖ್ಯವಾಗಿ ಮಳೆಗಾಲದ ಸಂದರ್ಭ ಯಾವುದೇ ರೀತಿಯ ಅಪಾಯವನ್ನು ತಡೆಗಟ್ಟುವ ಮುಂಜಾಗೃತಾ ಕ್ರಮವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸುವುದು ಅತೀ ಅಗತ್ಯವಾಗಿದೆ ಎಂದು ಮೇಯರ್ ಅಭಿಪ್ರಾಯಿಸಿದರು.

ಈಗಾಗಲೇ ನಿಯಮ ಉಲ್ಲಂಘಿಸಿ ಎಸ್‌ಟಿಪಿ ಇಲ್ಲದೆ ನಿರ್ಮಾಣವಾಗಿರುವ ಕಟ್ಟಡಗಳು ಹಾಗೂ ಕೈಗಾರಿಕೆಗಳ ವಿರುದ್ಧವೂ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಪ್ರಯತ್ನ
ಈಗಾಗಲೇ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಮಂಗಳೂರು ನಗರವನ್ನು ಮುಂದಿನ ಏಳು ತಿಂಗಳಲ್ಲಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪ್ರಯತ್ನಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಈ ಸಂದರ್ಭ ತಿಳಿಸಿದರು.

ತುಂಬೆಯಲ್ಲಿ 4.9 ಮೀಟರ್ ನೀರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟಿನಲ್ಲಿ ಪ್ರಸ್ತುತ 4.9 ಮೀಟರ್ ನೀರು ಸಂಗ್ರಹವಿದೆ. ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಕಾರಣ, ಪ್ರತಿನಿತ್ಯ ನೀರು ಪೂರೈಕೆಯ ಹೊರತಾಗಿಯೂ ಅಣೆಕಟ್ಟಿನಲ್ಲಿ ನೀರು ಲಭ್ಯವಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.

ಕಳೆದ ಬೇಸಿಗೆಯಲ್ಲಿ ನೀರಿನ ಕೊರತೆಯ ಹಿನ್ನೆಲೆಯಲ್ಲಿ ನಗರದಲ್ಲಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆಯಿಸಲಾಗಿತ್ತು. ಈ ಬಾರಿ ಬೆರಳೆಣಿಕೆಯ ಕೊಳವೆ ಬಾವಿಗಳನ್ನು ಮಾತ್ರ ಕೊರೆಯಿಸಲಾಗಿದೆ. ಸಾರ್ವಜನಿಕರಿಂದಲೂ ನೀರಿನ ಸಮಸ್ಯೆ ಬಗ್ಗೆ ನಿರ್ದಿಷ್ಠವಾದ ಯಾವುದೇ ಪ್ರಕರಣ ಅಥವಾ ದೂರುಗಳು ಬಂದಿಲ್ಲ ಎಂದು ಮೇಯರ್ ತಿಳಿಸಿದರು.

ಫೋನ್ ಇನ್ ಕಾರ್ಯಕ್ರಮ
ನಗರದ ಜನರ ಸಮಸ್ಯೆಗಳು, ಬೇಡಿಕೆಗಳಿಗೆ ಪೂರಕವಾಗಿ ನೇರವಾಗಿ ಸ್ಪಂದನೆ ನೀಡುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಮೇಯರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News