ಇದೆಂತಹಾ ದುಸ್ಸಾಹಸ ಅಂತೀರಾ!
ಮಂಗಳೂರು, ಮೇ 7: ನಿಜಕ್ಕೂ ಆ ವಿಡಿಯೋ ನೋಡಿದಾದ ಎದೆ ಝಲ್ಲೆನಿಸುತ್ತದೆ. ಕೇವಲ ಒಂದು ಕೋಳಿಗಾಗಿ ಬಾಲಕನೊಬ್ಬನನ್ನು ಬಾವಿಗಿಳಿಸುವ ದೃಶ್ಯ ಆ ವೀಡಿಯೋದ್ದು. ತುಳುವಿನಲ್ಲಿ ಸಂಭಾಷಣೆಯಲ್ಲಿರುವ ಆ ವೀಡಿಯೋ ದ.ಕ. ಜಿಲ್ಲೆಯಲ್ಲಿ ನಡೆದ ಘಟನೆಯ ಚಿತ್ರೀಕರಣವೆಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ.
ಆದರೆ ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬುದು ಮಾತ್ರ ಸ್ಪಷ್ಟವಿಲ್ಲ. ಈ ವೀಡಿಯೋ ಸದ್ಯ ವೈರಲ್ ಆಗಿದ್ದು, 'ಬಾವಿಗೆ ಬಿದ್ದ ಕೋಳಿಯನ್ನು ಮೇಲೆತ್ತಲು ದ.ಕ. ಜಿಲ್ಲೆಯ ಮಹಿಳಾ ವಿಜ್ಞಾನಿಗಳಿಂದ ಹೊಸ ಸಂಶೋಧನೆ' ಎಂಬ ಒಕ್ಕಣೆಯೊಂದಿಗೆ ಈ ವೀಡಿಯೋ ಹರಿದಾಡುತ್ತಿದೆ.
ನೀರಿಲ್ಲದ ಸುಮಾರು 30 ಅಡಿಯಷ್ಟಿರಬಹುದಾದ ಬಾವಿಯೊಂದಕ್ಕೆ ಬಿದ್ದ ಕೋಳಿಯೊಂದನ್ನು ರಕ್ಷಿಸಲು ಸುಮಾರು 10 ವರ್ಷದೊಳಗಿನ ಬಾಲಕನನ್ನು ಬಾವಿಯೊಳಗೆ ಹಗ್ಗದ ಮೂಲಕ ಇಳಿ ಬಿಡುವ ದೃಶ್ಯ. ನೋಡಲು ಇದು ತಮಾಷೆಯಾಗಿ ಕಂಡು ಬರುತ್ತಿದ್ದರೂ, ಇದರ ಅಪಾಯವನ್ನು ಮಾತ್ರ ಊಹಿಸಲು ಅಸಾಧ್ಯ.
ಬಾವಿಯಿಂದ ನೀರು ಸೇದುವ ಹಗ್ಗದ ಒಂದು ತುದಿಗೆ ಅಲ್ಯುಮಿನಿಯಂ ಬಕೆಟೊಂದನ್ನು ಕಟ್ಟಿ ಆ ಬಕೆಟ್ ನೊಳಗೆ ಬಾಲಕನನ್ನು ನಿಲ್ಲಿಸಿ ಬಾವಿಯೊಳಗೆ ಇಳಿ ಬಿಡುವ ದೃಶ್ಯವದು. ಅಚ್ಚರಿ ಹಾಗೂ ಆತಂಕದ ಸಂಗತಿ ಎಂದರೆ ಆ ಬಾವಿಗೆ ಆವರಣ ಗೋಡೆಯೇ ಇದ್ದಂತಿಲ್ಲ. ಮತ್ತೂ ಒಂದು ವಿಶೇಷ ಮೂವರು ಮಹಿಳೆಯರು ಬಾವಿಯ ಒಂದು ಪಾಶ್ವಕ್ಕೆ ಹಾಕಲಾದ ಏಳೆಂಟು ಮರದ ತೆಳ್ಳನೆ ದಿಮ್ಮಿಗಳ ಮೇಲೆ ನಿಂತಿರುವುದು. ಯಾವುದೇ ರೀತಿಯ ಸುರಕ್ಷಾ ವ್ಯವಸ್ಥೆಗಳಿಲ್ಲದೆ, ಪುಟ್ಟ ಬಾಲಕ (ಆತ ಬಕೆಟ್‌ನೊಳಗೆ ನಿಂತು ಬಾವಿಗೆ ಇಳಿಸುವ ಮುನ್ನ ಕೊಂಚ ಭಯದಿಂದಲೇ ನಗುತ್ತಲೇ ಮಹಿಳೆಯರ ಜತೆ ಸಂಭಾಷಣೆ ಮಾಡುತ್ತಾನೆ. ಮಹಿಳೆಯರು ಆತನಿಗೆ ಧೈರ್ಯ ತುಂಬಿ ಇಳಿ ಬಿಡುತ್ತಾರೆ)ನನ್ನು ಬಾವಿಯೊಳಗೆ ಇಳಿ ಬಿಡುವುದು.
ಬಕೆಟ್‌ನೊಂದಿಗೆ ಬಾವಿಯ ತಳಕ್ಕೆ ತಲುಪುವ ಬಾಲಕ ಬಕೆಟ್‌ನಿಂದ ಇಳಿದು ಕೋಳಿಯನ್ನು ಹಿಡಿದು ಅದನ್ನು ಬಕೆಟ್‌ನೊಳಗೆ ತನ್ನ ಕಾಲುಗಳಲ್ಲಿ ಹಿಡಿದು ಮೇಲಕ್ಕೆ ಬರುವುದು. ಈ ದೃಶ್ಯದಲ್ಲಿ ಪುಟ್ಟ ಬಾಲಕ ಹಾಗೂ ಮೂವರು ಮಹಿಳೆಯರು, ಕೋಳಿ ಮಾತ್ರ ಕಾಣಸಿಗುತ್ತಾರೆ. ಉಳಿದಂತೆ ಮಗುವಿನ ಮಾತು ಹಾಗೂ ಪುರುಷನೊಬ್ಬನ ಸಂಭಾಷಣೆ ಕೇಳಿಬರುತ್ತದೆಯಾದರೂ ವೀಡಿಯೋದಲ್ಲಿ ಅವರು ಕಾಣಸಿಗುವುದಿಲ್ಲ.
ಈ ದೃಶ್ಯ ನೋಡುವಾಗ ಆ ಬಾಲಕನ ಧೈರ್ಯವನ್ನು ಮೆಚ್ಚಬೇಕೋ, ಅಥವಾ ಆ ಬಾಲಕನನ್ನು ಯಾವುದೇ ಸುರಕ್ಷಾ ವ್ಯವಸ್ಥೆ ಇಲ್ಲದ ಬಾವಿಯೊಳಕ್ಕೆ ಇಳಿಬಿಟ್ಟು ಇದನ್ನೆಲ್ಲಾ ಚಿತ್ರೀಕರಿಸಿದವರ ಹುಚ್ಚುತನಕ್ಕೆ ಏನನ್ನಬೇಕೋ.