ಯುಪಿಸಿಎಲ್: 20 ಲಕ್ಷ ರೂ. ವೆಚ್ಚದ ವಿವಿಧ ಸೌಲಭ್ಯ ಉದ್ಘಾಟನೆ

Update: 2017-05-07 15:09 GMT

ಪಡುಬಿದ್ರಿ, ಮೇ 7: ಎಲ್ಲೂರು ಕೇಂದ್ರಿತವಾಗಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಯುಪಿಸಿಎಲ್ ಕಂಪೆನಿ ಸಿಎಸ್‌ಆರ್ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಮುದರಂಗಡಿ ಗ್ರಾಪಂ ವ್ಯಾಪ್ತಿಯ ಸಂತ ಫ್ರಾನ್ಸೀಸ್ ಕ್ಸೇವಿಯರ್ ಚರ್ಚ್ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಲಾಯಿತು.

ಇದರಲ್ಲಿ ಹಿರಿಯ ನಾಗರಿಕರಿಗೆ ಜಿಮ್, ಮಕ್ಕಳ ಆಟದ ಮೈದಾನ, ಚರ್ಚ್ ಆವರಣ ಗೋಡೆ, ವಾಹನ ನಿಲುಗಡೆ ಸ್ಥಳ ಹಾಗೂ ಪೇವರ್ ಬ್ಲಾಕ್ ನೆಲದ ವ್ಯವಸ್ಥೆಯನ್ನು ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಜೆರಾಲ್ಡ್ ಐಸಾಕ್ ಲೋಬೊ, ಕರ್ನಾಟಕ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ಸೇವಿಯರ್ ಲೂಯಿಸ್, ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ ಉದ್ಘಾಟಿಸಿದರು.

ಸಂತ ಫ್ರಾನ್ಸೀಸ್ ಕ್ಸೇವಿಯರ್ ಚರ್ಚ್ ಆರಂಭವಾಗಿ 75 ವರ್ಷ ಕಳೆದು ರಜತ ಮಹೋತ್ಸವ ಆಚರಿಸುತ್ತಿದ್ದು, ಇದೇ ವಠಾರದಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಕನ್ನಡ ಪ್ರಾಥಮಿಕ ಶಾಲೆ ತನ್ನ ಶತಮಾನೋತ್ಸವ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಹಿರಿಯರ ವ್ಯಾಯಮ ಶಾಲೆ, ಮಕ್ಕಳಿಗೆ ಆಟದ ಮೈದಾನ ಹಾಗೂ ಇತರೆ ಸೌಲಭ್ಯಗಳನ್ನು ಅದಾನಿ ಯುಪಿಸಿಎಲ್ ವತಿಯಿಂದ ಲೋಕಾರ್ಪಣೆ ಮಾಡಲಾಯಿತು.

ಉಡುಪಿ ಧರ್ಮಾಧ್ಯಕ್ಷ ಅ.ವಂ.ಜೆರಾಲ್ಡ್ ಐಸಾಕ್ ಲೋಬೊ ಹಾಗೂ ವಂ. ಬ್ಯಾಪ್ಟಿಸ್ಟ್ ಮಿನೆಜೆಸ್ ಆಶೀರ್ವಚನ ನೀಡಿದರು. ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಸಂತ ಫ್ರಾನ್ಸೀಸ್ ಕ್ಸೇವಿಯರ್ ಚರ್ಚ್ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News