"ದೇಶಕ್ಕೆ ಅಕ್ರಮ ಪ್ರವೇಶಗೈದ ಆರ್ಯರು ಮೂಲನಿವಾಸಿಗಳನ್ನು ದಮನಿಸುತ್ತಿರುವುದು ದುರದೃಷ್ಟಕರ"

Update: 2017-05-07 15:19 GMT

ಮುಲ್ಕಿ, ಮೇ 7: ಭಾರತದ ಮೂಲ ನಿವಾಸಿಗಳಾದ ಅಲ್ಪಸಂಖ್ಯಾತರು, ದಲಿತರನ್ನು ಭಾರತಕ್ಕೆ ಅಕ್ರಮ ಪ್ರವೇಶಿಸಿದ ಶೇ.15ರಷ್ಟಿರುವ ಆರ್ಯರು ದಮನಿಸಿ ಹೀನಾಯವಾಗಿ ಆಳುತ್ತಿರುವುದು ದುರದೃಷ್ಟಕರ ವಿಚಾರ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಎಂ.ವಿ. ಪದ್ಮನಾಭ ಹೇಳಿದ್ದಾರೆ.

ಮುಲ್ಕಿ ಹೋಬಳಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಫ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ರವಿವಾರ ಕೆಂಚನಗೆರೆ ಸರಕಾರಿ ಶಾಲಾ ವಠಾರದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ದೇಶದ ಪ್ರಥಮ ಶಿಕ್ಷಣ ತಜ್ಞ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೆ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೇವಲ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಆಚರಿಸುತ್ತಿದ್ದ ಅಂಬೇಡ್ಕರ್ ಜಯಂತಿಯನ್ನು ಸರ್ವ ಧರ್ಮೀಯರು, ರಾಜಕೀಯ ಪಕ್ಷಗಳೂ ಆಚರಿಸುತ್ತಿವೆಯಾದರೂ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಇಂದಿಗೂ ಕಡಿಮೆಯಾಗಿಲ್ಲ. ಕೇವಲ ಶಿಕ್ಷಣದಿಂದ ಮಾತ್ರ ತಾರತಮ್ಯ, ಜಾತಿ ಧರ್ಮಗಳ ಸಂಕೋಲೆ ಕಳಚಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜ ಸೇವಾ ಸಂಸ್ಥೆಗಳು, ಹೆತ್ತವರು ಶ್ರಮಹಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಮಾತನಾಡಿ, ಮಹಾನ್ ಚೇತನ, ಕಾನೂನು ತಜ್ಞ ಡಾ.ಬಾಬಾ ಸಾಹೇಬರು ರಚಿಸಿದ ಕಾನೂನು ಎಲ್ಲರಿಗೂ ಸಮಬಾಳು- ಎಲ್ಲರಿಗೂ ಸಮಪಾಲು ಎಂಬುದನ್ನು ಹೇಳಿದೆ. ಆದರೆ, ದೇಶ ಆಳುವವರು ಜಾತಿ ಧರ್ಮಗಳಾಗಿ ವಿಂಗಡಿಸಿಕೊಂಡು ತಮ್ಮ ರಾಜಕೀಯ ಲಾಭಕ್ಕಾಗಿ ಕೆಳವರ್ಗ, ಮೇಲ್ವರ್ಗ ಎಂಬ ಬೇಧ ಭಾವ ಮಾಡುತ್ತಾ ತಾರತಮ್ಯ ಎಸಗುತ್ತಿದ್ದಾರೆ. ಜಾತಿ, ಧರ್ಮ, ಕೀಳು-ಮೇಲು ಎಂಬ ಭಾವನೆ ಜನರಿಂದ ತೊಲಗಬೇಕಾದರೆ ಸಂವಿಧಾನ ಶಿಲ್ಪಿ ರಚಿಸಿರುವ ಕಾನೂನು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿದ ದಸಂಸ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಲಕ್ಷ್ಮಣ ವಾಮಂಜೂರು, ಅಂಬೇಡ್ಕರರ ಕಾಲದಲ್ಲಿ ದೇಶದ ಮೂಲನಿವಾಸಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದಂತೆಯೇ ಇಂದಿಗೂ ದೌರ್ಜನ್ಯಗಳು ನಡೆಯುತ್ತಿವೆ. ಇದಕ್ಕೆ ಇತ್ತೀಚೆಗೆ ಉಡುಪಿಯ ಕೊರಗ ಸಮುದಾಯದ ಮದುವೆ ಮನೆಯೊಂದರಲ್ಲಿ ಸಂಘಪರಿವಾರದವರು ನಡೆಸಿದ ಹಲ್ಲೆಯೇ ಪ್ರತ್ಯಕ್ಷ ನಿದರ್ಶನ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಡಾ. ಕೆ. ಹರಿಪ್ರಸಾದ್ ಮುಲ್ಕಿ, ಬಬ್ಬು ಸ್ವಾಮಿ ದೈವ ಪಾತ್ರಿಯಾಗಿರುವ ಶೀನ ಪಾತ್ರಿ, ದಸಂಸದ ಹಿರಿಯ ಮುಖಂಡರಾದ ಸುಂದರ ಸಾಲ್ಯಾನ್ ಕೆಮ್ಮಡೆ, ಅಣ್ಣು ಸಾಧನ ಬೆಳ್ತಂಗಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹೋಬಳಿ ದಸಂಸ ಸಂಚಾಲಕ ಶ್ರೀನಾಥ್ ಕೆಂಚನ ಕೆರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದಸಂಸ ಜಿಲ್ಲಾ ಮಹಿಳಾ ಸಂಚಾಲಕಿ ವನಿತಾ, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ, ಯೋಗಗುರು ಜಯ ಮುದ್ದು ಶೆಟ್ಟಿ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಕೆರೆಕಾಡು, ತಾಲೂಕು ಸಂಚಾಲಕ ಲೋಕೇಶ್ ಚಿತ್ರಾಪು, ಕೆಂಚನಕೆರೆ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ ಮೋಹನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಸುರೇಖಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿವಾಣಿ, ಶಿವಾಲಿ, ಅಶ್ವಿತಾ ಕ್ರಾಂತಿ ಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News