ವಾಸಿಯಾಗದ ಕಾಯಿಲೆಯಿದ್ದರೆ ಮದುವೆಗೆ ಮುನ್ನ ತಿಳಿಸಬೇಕು ಬಾಂಬೆ ಹೈಕೋರ್ಟ್ ಸೂಚನೆ

Update: 2017-05-07 16:14 GMT

ಮುಂಬೈ, ಮೇ 7: ವಾಸಿಯಾಗದ ಕಾಯಿಲೆಯಿದ್ದರೆ ಅದನ್ನು ತಮ್ಮ ಸಂಗಾತಿಯಾಗುವವರಿಗೆ ತಿಳಿಸಿ ಆ ಮೇಲೆ ಮದುವೆಯಾಗಬೇಕು ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.

 ಮಹಿಳೆಗೆ ಇರುವ ಕಾಯಿಲೆ ವೈವಾಹಿಕ ಬದುಕಿಗೆ ಅಡ್ಡಿಯಾಗದಿದ್ದರೂ , ಈ ಕಾಯಿಲೆಯ ಬಗ್ಗೆ ಮದುವೆಯಾದ ಮೇಲೆ ತಿಳಿಸುವುದರಿಂದ ವೈವಾಹಿಕ ಸಂಬಂಧವನ್ನು ಮುಂದುವರಿಸದಿರಲು ವ್ಯಕ್ತಿ ನಿರಾಕರಿಸುವ ಸಾಧ್ಯತೆಯಿದೆ. ಆದ್ದರಿಂದ ಈ ರೀತಿಯ ಸಮಸ್ಯೆಯನ್ನು ವಿವಾಹಕ್ಕೆ ಮೊದಲೇ ಬಹಿರಂಗ ಪಡಿಸುವುದು ಒಳ್ಳೆಯದು ಎಂದು ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠವೊಂದು ಅಭಿಪ್ರಾಯಪಟ್ಟಿದೆ.

 28ರ ಹರೆಯದ ಮಹಿಳೆಯೋರ್ವಳು ಜೀವಕೋಶದ ರಕ್ತಹೀನತೆ ಕಾಯಿಲೆಯಿಂದ ಬಳಲುತ್ತಿದ್ದಳು. ಆದರೆ ವಿವಾಹದ ಸಂದರ್ಭ ಆಕೆಯ ತವರು ಮನೆಯವರು ಈ ವಿಷಯವನ್ನು ಮುಚ್ಚಿಟ್ಟಿದ್ದರು. 2009ರ ಜೂನ್‌ನಲ್ಲಿ ಇವರ ವಿವಾಹವಾಗಿತ್ತು. ಮದುವೆಯಾದ ನಾಲ್ಕು ತಿಂಗಳ ಬಳಿಕ ತವರು ಮನೆಗೆ ಆಗಮಿಸಿದ ಮಹಿಳೆ ಕಾಯಿಲೆ ಉಲ್ಬಣಿಸಿದ ಕಾರಣ ಆಸ್ಪತ್ರೆಗೆ ದಾಖಲಾಗಬೇಕಾಯಿತು.

ಆಗ ಆಸ್ಪತ್ರೆಗೆ ತೆರಳಿದ ಪತಿಗೆ ತನ್ನ ಪತ್ನಿಯ ಕಾಯಿಲೆಯ ಬಗ್ಗೆ ತಿಳಿಯಿತು. ತಕ್ಷಣ ಆತ ಅಕೋಲಾದಲ್ಲಿರುವ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿ, ವಿವಾಹದ ಸಂದರ್ಭ ಕೆಲವೊಂದು ವಿಷಯಗಳನ್ನು ಪತ್ನಿ ಮತ್ತು ಆಕೆಯ ಮನೆಯವರು ಮುಚ್ಚಿಟ್ಟ ಕಾರಣ ವಿವಾಹವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದ. ಆದರೆ ಮಹಿಳೆ ಯ ಕಾಯಿಲೆ ವಾಸಿಯಾಗದ ರೋಗವಾದರೂ ಇದನ್ನು ನಿಯಂತ್ರಿಸಲು ಸಾಧ್ಯವಿದೆ ಎಂಬ ಕಾರಣ ನೀಡಿ ಕುಟುಂಬ ನ್ಯಾಯಾಲಯ ಅರ್ಜಿಯನ್ನು ತಳ್ಳಿಹಾಕಿತ್ತು. ಬಳಿಕ ಆತ ಬಾಂಬೆ ಹೈಕೋರ್ಟ್‌ನ ಮೊರೆ ಹೋಗಿದ್ದ. ಹೈಕೋರ್ಟ್ ಕುಟುಂಬ ನ್ಯಾಯಾಲಯದ ತೀರ್ಪಿಗೆ ವಿರುದ್ಧ ತೀರ್ಪು ನೀಡಿತು.

ಮಹಿಳೆಯ ಕಾಯಿಲೆ ವೈವಾಹಿಕ ಬದುಕಿಗೆ ಸಮಸ್ಯೆಯಾಗದಿದ್ದರೂ, ಇಂತಹ ಕಾಯಿಲೆಯ ಬಗ್ಗೆ ಮದುವೆಯಾದ ನಂತರ ತಿಳಿಸುವುದರಿಂದ ಆತ ಮದುವೆಯನ್ನು ನಿರಾಕರಿಸಲು ಮುಂದಾಗುವ ಸಾಧ್ಯತೆಯಿದೆ. ಅಲ್ಲದೆ ಸುಖವಾದ ವೈವಾಹಿಕ ಜೀವನವನ್ನು ಬಯಸಿ ಮದುವೆಯಾಗುವ ವ್ಯಕ್ತಿ, ಜೀವಮಾನವಿಡೀ ತನ್ನ ಪತ್ನಿಯ ಬಗ್ಗೆ ಕನಿಕರದ ಭಾವನೆ ಹೊಂದಿರಲು ಇಚ್ಚಿಸುವುದಿಲ್ಲ. ಅಲ್ಲದೆ ಈ ಪ್ರಕರಣದಲ್ಲಿ ಪತಿಯು ಪತ್ನಿಯ ಕಾಯಿಲೆಯ ವಿಷಯ ತಿಳಿದ ಬಳಿಕ ಆಕೆಯೊಡನೆ ವೈವಾಹಿಕ ಸಂಬಂಧ ಮುಂದುವರಿಸಲು ನಿರಾಕರಿಸಿದ್ದಾನೆ.

ಆದ್ದರಿಂದ ವಿವಾಹ ರದ್ದುಗೊಳಿಸಬೇಕು ಎಂಬ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಧೀಶರಾದ ವಸಂತಿ ನಾಕ್ ಮತ್ತು ಸ್ವಪ್ನ ಜೋಷಿ ಅವರನ್ನೊಳಗೊಂಡಿರುವ ವಿಭಾಗೀಯ ಪೀಠ ತಿಳಿಸಿದೆ.

           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News