×
Ad

2014ರಲ್ಲಿ ಬಳಸಲಾದ ಇಎಂವಿ ಯಂತ್ರಗಳ ವಿಧಿವಿಜ್ಞಾನ ಪರೀಕ್ಷೆಗೆ ಹೈಕೋರ್ಟ್ ಆದೇಶ

Update: 2017-05-07 21:12 IST

ಮುಂಬೈ, ಮೇ 7: ಮಹಾರಾಷ್ಟ್ರದ ಪಾರ್ವತಿ ವಿಧಾನಸಭಾ ಕ್ಷೇತ್ರಕ್ಕೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಬಳಸಲಾದ ವಿದ್ಯುನ್ಮಾನ ಮತ ಯಂತ್ರ (ಇಎಂವಿ)ಗಳ ವಿಧಿವಿಜ್ಞಾನ ಪರೀಕ್ಷೆ ನಡೆಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.

 ಈ ಮತಯಂತ್ರಗಳನ್ನು ತಿರುಚಲಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವ ಉದ್ದೇಶವಿದೆ. ಮತಯಂತ್ರಗಳ ಎಣಿಕೆ ವಿಭಾಗ, ಅಥವಾ ಮತಪತ್ರ ವಿಭಾಗವನ್ನು ರಿಮೋಟ್ ವ್ಯವಸ್ಥೆಯ ಮೂಲಕ ತಿರುಚಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ಪ್ರಧಾನ ನ್ಯಾಯಮೂರ್ತಿ ಆದೇಶದಲ್ಲಿ ತಿಳಿಸಿದ್ದಾರೆ. ಪಾರ್ವತಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಎ.ಬಿ.ಚಾಜೆದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಸಂದರ್ಭ ಹೈಕೋರ್ಟ್ ಈ ಆದೇಶ ಹೊರಡಿಸಿದೆ.

ಎರಡು ವರ್ಷ ವಿಚಾರಣೆ ನಡೆಸಿದ ಬಳಿಕ ಮೇ 4ರಂದು ಹೈಕೋರ್ಟ್‌ನ ಆದೇಶ ಹೊರಬಿದ್ದಿದ್ದು, ಈ ಆದೇಶದಲ್ಲಿ ಹೈಕೋರ್ಟ್ 9 ಪ್ರಮುಖ ಪ್ರಶ್ನೆಗಳನ್ನೂ ಮುಂದಿಟ್ಟಿದೆ.

   ಬ್ಲೂಟೂಥ್ ರೀತಿಯ ಸಾಧನಗಳನ್ನು ಬಳಸಿ ಇಎಂವಿಗಳ ಕಾರ್ಯ ನಿರ್ವಹಣೆಯನ್ನು ನಿಯಂತ್ರಿಸಲು ಸಾಧ್ಯವೇ, ಇಎಂವಿ ಒಳಗಡೆ ಇತರ ಯಾವುದಾದರೂ ‘ಮೆಮೊರಿ ಚಿಪ್’ ಇದೆಯೇ.. ಇತ್ಯಾದಿ ಪ್ರಶ್ನೆಗಳನ್ನು ಹೈದರಾಬಾದಿನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದ ಮುಂದಿರಿಸಿದೆ.

 ಪಾರ್ವತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎ.ಬಿ. ಚಾಹೆದ್ ಬಿಜೆಪಿಯ ಸ್ಪರ್ಧಿ ಎದುರು ಸೋತಿದ್ದರು. ಚುನಾವಣಾ ಫಲಿತಾಂಶ ಹೊರಬಿದ್ದಾಗ ಆಘಾತವಾಗಿತ್ತು. ಬಳಿಕ ಬೂತ್ ಮಟ್ಟದಲ್ಲಿ ಸಮೀಕ್ಷೆ ನಡೆಸಿದಾಗ ಬಹುತೇಕ ಜನ ತನಗೇ ಮತ ಹಾಕಿರುವುದಾಗಿ ತಿಳಿಸಿದ್ದರು. ಹೀಗಿರುವಾಗ ತಾನು ಸೋಲಲು ಸಾಧ್ಯವೇ ಇಲ್ಲ. ಆದ್ದರಿಂದ ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಅನುಮಾನಗೊಂಡು ದೂರು ಸಲ್ಲಿಸಿದ್ದೇನೆ ಎಂದು ಚಾಹೆದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News