ಮದುವೆ ಸಮಾರಂಭದ ಬಸ್ ಪಲ್ಟಿ: ಓರ್ವ ಮೃತ್ಯು

Update: 2017-05-07 16:32 GMT

ಶಿರ್ವ, ಮೇ 7: ಮದುವೆಗೆ ದಿಬ್ಬಣದಿಂದ ಜನರನ್ನು ಮರಳಿ ಕರೆತರುತ್ತಿದ್ದ ಮಿನಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಬಸ್ಸಿನಲ್ಲಿದ್ದ ಓರ್ವರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡ ಘಟನೆ ಇಂದು ಪಿಲಾರುಖಾನದ ಗುಂಡುಪಾದೆ ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಶಂಕರಪುರ ಅರಸಿನಕಟ್ಟೆಯ ಸುನಿಲ್(21) ಎಂದು ಗುರುತಿಸಲಾಗಿದ್ದು, ಬಸ್ಸಿನ ಬಾಗಿಲ ಬಳಿ ನಿಂತಿದ್ದರು. ಪಲ್ಟಿಯಾಗುವಾಗ ಬಸ್ಸಿನಡಿಯಲ್ಲಿ ಸಿಲುಕಿಕೊಂಡಿದ್ದರೆನ್ನಲಾಗಿದೆ. ಅವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು. ಬಸ್ಸಿನಲ್ಲಿದ್ದ ಸುಮಾರು ಐವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಇವರೆಲ್ಲ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳ್ಮಣ್‌ನ ಕೃಷ್ಣ ಸಭಾಭವನದಲ್ಲಿ ಶಂಕರಪುರ ಇನ್ನಂಜೆಯ ಭೋಜ ಕುಲಾಲ್ ಎಂಬವರ ಪುತ್ರಿಯ ವಿವಾಹ ಕಾರ್ಯ ಮುಗಿಸಿ ಹೆಣ್ಣಿನ ಕಡೆಯ ದಿಬ್ಬಣ ದವರನ್ನು ಶಂಕರಪುರಕ್ಕೆ ಟೂರಿಸ್ಟ್ ಟೆಂಪೊ ಟ್ರಾವಲ್‌ನಲ್ಲಿ ಮರಳಿ ಕರೆತರುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್ಸಿನಲ್ಲಿ ಒಟ್ಟು 12 ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ಬಸ್ಸನ್ನು ಪಿಲಾರುಖಾನ ಗುಂಡುಪಾದೆ ಬಳಿ ತಿರುವಿನಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿ ಹೊಡೆಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಹನದ ಗಾಜನ್ನು ಒಡೆದು ಪ್ರಯಾಣಿಕರನ್ನು ಹೊರತೆಗೆಯಲಾಯಿತು. ಮದುವೆ ಮನೆಯವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆ ಬ್ಲಾಕ್ ಆಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಜನರ ಮತ್ತು ವಾಹನಗಳ ದಟ್ಟಣೆ ಉಂಟಾಗಿತ್ತು. ರಸ್ತೆಯಲ್ಲಿ ಬಿದ್ದ ಟೆಂಪೊವನ್ನು ಜೆಸಿಬಿ ಮೂಲಕ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಸುಗಮ ಗೊಳಿಸಲಾಯಿತು.ಇದಕ್ಕೆ ಶಿರ್ವ ಪೊಲೀಸರಿಗೆ ವಿವಿಧ ಸಂಘಟನೆಗಳ ಸದಸ್ಯರು ನೆರವಾದರು.

ವಾಟ್ಸ್ಯಾಪ್ ಹಾವಳಿ: ಈ ನಡುವೆ ಟೆಂಪೊ ಮಗುಚಿ ವಾಹನದೊಳಗಿದ್ದ ಪ್ರಯಾಣಿಕರು ಬೊಬ್ಬೆ ಹೊಡೆಯುತ್ತಿದ್ದರೂ, ಬೇರೆ ವಾಹನಗಳಿಂದ ಇಳಿದ ಯುವಕ-ಯುವತಿಯರು ಸಹಾಯಕ್ಕೆ ಸ್ಪಂದಿಸದೇ ತಮ್ಮ ಮೊಬೈಲ್‌ಗಳಲ್ಲಿ ಅವುಗಳ ಚಿತ್ರೀಕರಣ ನಡೆಸಿ ವಾಟ್ಸ್ಯಾಪ್ ಮೂಲಕ ತನ್ನ ಸ್ನೇಹಿತರಿಗೆ, ಸಂಬಂಧಿಗಳಿಗೆ ಕಳುಹಿಸಲು ಮುಂದಾಗಿದ್ದರು. ಈ ಸಂದರ್ಭ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿಯೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News