ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು
ಉಡುಪಿ, ಮೇ 7: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು ಮೂರು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿದ ಘಟನೆ ಶಿವಳ್ಳಿ ಗ್ರಾಮದ ಕಲ್ಸಂಕ-ಮಣಿಪಾಲ ರಸ್ತೆಯ ಸಮೀಪದ ಮನೆಯೊಂದರಲ್ಲಿ ನಡೆದಿದೆ.
ಅಮ್ಮುಂಜೆ ಪ್ರೇಮಾನಂದ ನಾಯಕ್ ಅವರು ಪೂನಾದಲ್ಲಿರುವ ತನ್ನ ಮೊಮ್ಮಗನ ಹುಟ್ಟುಹಬ್ಬಕ್ಕೆಂದು ಮೇ 3ರಂದು ಕುಟುಂಬದೊಂದಿಗೆ ತೆರಳಿದ್ದು, ಇಂದು ಬೆಳಗ್ಗೆ 7:30ರ ಸುಮಾರಿಗೆ ಮರಳಿ ಬಂದು ನೋಡಿದಾಗ ಮನೆ ಎದುರಿನ ಬಾಗಿಲು ಮುರಿದಿರುವುದು ಕಂಡುಬಂತು. ಆದರೆ ಒಳಗೆ ಲಾಕ್ ಆಗಿದ್ದರಿಂದ, ಹಿಂಬದಿ ಹೋಗಿ ನೋಡಿದಾಗ ಹಿಂದಿನ ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದು, ಬೆಡ್‌ರೂಮಿನಲ್ಲಿದ್ದ ಕಪಾಟಿನಲ್ಲಿದ್ದ ಚಿನ್ನಾಭರಣಗಳೆಲ್ಲ ವನ್ನೂ ಕಳ್ಳರು ದೋಚಿಕೊಂಡು ಹೋಗಿದ್ದರು.
ಸುಮಾರು 14 ಗ್ರಾಂ ನವರತ್ನದ ಉಂಗುರ, 14 ಗ್ರಾಂನ ವಜ್ರದ ಉಂಗುರ, 24 ಗ್ರಾಂನ ಲಕ್ಷ್ಮಿ ಪೆಂಡೆಂಟ್ ಸಹಿತ ಬಂಗಾರದ ಚೈನ್, 24 ಗ್ರಾಂನ ಬಂಗಾರದ ನೆಕ್ಲೆಸ್, ತಲಾ 16 ಗ್ರಾಂ ತೂಕದ ಎರಡು ಚಿನ್ನದ ಬಳೆ, ದಾಮೋದರ ದೇವರ ಚಿತ್ರವಿರುವ 5 ಗ್ರಾಂನ ಚಿನ್ನದ ನಾಣ್ಯ, ಮಂಜೇಶ್ವರ ದೇವರ ಚಿತ್ರವಿರುವ 3 ಗ್ರಾಂ ಬಂಗಾರದ ನಾಣ್ಯ ಹಾಗೂ ಲಕ್ಷ್ಮಿ ಚಿತ್ರವಿರುವ 4 ಗ್ರಾಂ ತೂಕದ ಬಂಗಾರದ ನಾಣ್ಯ ಸೇರಿ ಒಟ್ಟು 120 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಇವುಗಳ ಅಂದಾಜು ವೌಲ್ಯ ಮೂರು ಲಕ್ಷ ರೂ.ಗಳಾಗಿವೆ. ಅಲ್ಲದೇ ಗಾದ್ರೆಜ್‌ನ ಸ್ಟೀಲ್ ಬಾಕ್ಸ್‌ನಲ್ಲಿದ್ದ 35,000 ರೂ.ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಅಮ್ಮುಂಜೆ ಪ್ರಭಾಕರ ನಾಯಕ್ ಉಡುಪಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.