×
Ad

ಪಲಿಮಾರಿನ ಚಿತ್ರಾಲಯ ಆರ್ಟ್ ಗ್ಯಾಲರಿ ಉದ್ಘಾಟನೆ

Update: 2017-05-07 23:52 IST

ಪಡುಬಿದ್ರೆ, ಮೇ 7: ಟೆರ್ರಕೋಟಾ ಕಲಾವಿದ ವೆಂಕಿ ಪಲಿಮಾರ್ ಅವರ ಪಲಿಮಾರಿನ ಶಾಂಭವಿ ನಗರದಲ್ಲಿ ನಿರ್ಮಿಸಿರುವ ಚಿತ್ರಾಲಯ ಆರ್ಟ್ ಗ್ಯಾಲರಿಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜನರಲ್ಲಿ ಸಾಮಾಜಿಕ ಚಿಂತನೆಯಲ್ಲಿ ಬದಲಾವಣೆ ತರುವ ಮೂಲಕ ಭಾರತದಲ್ಲಿರುವ ವಿರಳವಾದ ಕಲಾವಿದರನ್ನು ರಕ್ಷಣೆ ಮಾಡಬೇಕಾಗಿದೆ. ಇದಕ್ಕಾಗಿ ಪ್ರತಿಯೋರ್ವರೂ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ರಾಜರ ಕಾಲದಲ್ಲಿ ಚಿತ್ರಕಲೆ ಸಹಿತ ಇತರ ಕಲಾಕಾರರಿಗೆ ತಮ್ಮ ಆಸ್ಥಾನದಲ್ಲಿಯೇ ವಿಶೇಷ ಸ್ಥಾನ ನೀಡುತ್ತಿದ್ದರು. ಆದರೆ ಇಂದು ಅದು ಮರೆಯಾಗಿದೆ. ವಿದೇಶಗಳಲ್ಲೂ ಕಲಾಕಾರರಿಗೆ ಭಾರೀ ಪ್ರೋತ್ಸಾಹ ನೀಡಲಾಗುತ್ತದೆ. ಭಾರತದ ಕಲಾಕೃತಿಗಳನ್ನು ಖರೀದಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಆದರೆ ನಮ್ಮಲ್ಲಿ ಕಲಾಕಾರರಿಗೆ ಪ್ರೋತ್ಸಾಹ ನೀಡುವುದು ವಿರಳವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶವಾದ ಪಲಿಮಾರಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕಲಾತ್ಮಕವಾಗಿ ನಿರ್ಮಾಣಗೊಂಡಿರುವ ಚಿತ್ರಾಲಯ ಆರ್ಟ್ ಗ್ಯಾಲರಿ ಸುಮಾರು 750 ಚದರ ಅಡಿ ವಿಸ್ತೀರ್ಣ ಹೊಂದಿದೆ. ಗ್ಯಾಲರಿ ಉದ್ಘಾಟನೆ ಅಂಗವಾಗಿ ಮೂರು ದಿನಗಳ ಕಾಲ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿದ್ದು, ಸುಮಾರು 40 ಕಲಾಕೃತಿಗಳು ಪ್ರದರ್ಶಿತವಾಗಲಿದೆ. ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ವೆಂಕಿ ಪಲಿಮಾರು ಹೇಳಿದರು.

ಸನ್ಮಾನ: ಇದೇ ಸಂದರ್ದಲ್ಲಿ ಕಲಾವಿದರಾದ ಅಕ್ಷ್ ರಾಜ್ ಹಾಗೂ ಲೋರೆನ್ ಪಿಂಟೋ, ಪವನ ಬಿ.ಆಚಾರ್ ಅವರನ್ನು ಪ್ರಮೋದ್ ಮಧ್ವರಾಜ್ ಅವರು ಸನ್ಮಾನಿಸಿದರು.

ಆರ್ಟಿಸ್ಟ್ ಪೋರಂ ಮಾಜಿ ಅಧ್ಯಕ್ಷ ರಮೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಪುಟಾರ್ಡೋ, ಸದಸ್ಯೆ ಗಾಯತ್ರಿ, ವೆಂಕಿ ಪಲಿಮಾರು, ಉಮೇಶ್ ಕಾಮತ್, ಪದ್ಮಾವತಿ ವಿ.ಕಾಮತ್, ಮಹಾಬಲ ಕುಲಾಲ್ ಉಪಸ್ಥಿತರಿದ್ದರು. ರಾಜೇಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News