ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಮ್ಯಾನುಯಲ್​ ಮ್ಯಾಕ್ರನ್ ಗೆ ಭರ್ಜರಿ ಜಯ

Update: 2017-05-08 13:49 GMT

​ಪ್ಯಾರಿಸ್ (ಫ್ರಾನ್ಸ್), ಮೇ 8: ಸ್ವತಂತ್ರ ಅಭ್ಯರ್ಥಿ ಇಮಾನುಯೆಲ್ ಮ್ಯಾಕ್ರೋನ್ ಫ್ರಾನ್ಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ರವಿವಾರ ನಡೆದ ಅಧ್ಯಕ್ಷೀಯ ಚುನಾವಣೆಯ ಎರಡನೆ ಸುತ್ತಿನ ಮತದಾನದಲ್ಲಿ ಅವರು ತನ್ನ ಎದುರಾಳಿ ತೀರಾ ಬಲಪಂಥೀಯ ಮರೀನ್ ಲೆ ಪೆನ್‌ರನ್ನು 32.2 ಶೇಕಡ ಮತಗಳ ಭರ್ಜರಿ ಅಂತರದಿಂದ ಸೋಲಿಸಿದರು.

ಐರೋಪ್ಯ ಒಕ್ಕೂಟದಲ್ಲಿ ಮುಂದುವರಿಯುವುದು ಸೇರಿದಂತೆ ಹಲವಾರು ಸುಧಾರಣಾವಾದಿ ಕಾರ್ಯಸೂಚಿಗಳನ್ನು ಮ್ಯಾಕ್ರೋನ್ ಹೊಂದಿದ್ದರೆ, ಐರೋಪ್ಯ ಒಕ್ಕೂಟದಿಂದ ಹೊರಬರುವ ಹಾಗೂ ಹಲವಾರು ವಿಭಜನವಾದಿ ಸಿದ್ಧಾಂತಗಳನ್ನು ಅವರ ಎದುರಾಳಿ ಲೆ ಪೆನ್ ಹೊಂದಿದ್ದರು.

ತೀರಾ ಬಲಪಂಥೀಯ ನಿಲುವುಗಳುಳ್ಳ ಲೇ ಪೆನ್‌ರ ಪಕ್ಷ ನ್ಯಾಶನಲ್ ಫ್ರಂಟ್, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನ ನಾಝಿ ಸಿದ್ಧಾಂತದ ಬಗ್ಗೆ ಒಲವು ಹೊಂದಿದೆ.

ಎಪ್ರಿಲ್ 23ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಎಂಟು ಅಭ್ಯರ್ಥಿಗಳ ಪೈಕಿ ಮ್ಯಾಕ್ರೋನ್ ಮತ್ತು ಪೆನ್ ಮೊದಲ ಎರಡು

ಸ್ಥಾನಗಳನ್ನು ಪಡೆದಿದ್ದರು. ಅವರ ನಡುವಿನ ನೇರ ಆಯ್ಕೆಯನ್ನು ಫ್ರಾನ್ಸ್ ಮತದಾರರು ರವಿವಾರ ನಡೆದ ಎರಡನೆ ಸುತ್ತಿನಲ್ಲಿ ಮಾಡಿದರು.
ಈ ಫಲಿತಾಂಶದೊಂದಿಗೆ ಮತದಾರರು ನೂತನ ಅಧ್ಯಕ್ಷರಿಗೆ ಸುಧಾರಣೆ ಪರ ಜನಾದೇಶವನ್ನು ನೀಡಿದ್ದಾರೆ.

39 ವರ್ಷದ ಮಾಜಿ ಹೂಡಿಕೆ ಬ್ಯಾಂಕರ್ ಈಗ ದೇಶದ ಅತ್ಯಂತ ಕಿರಿಯ ನಾಯಕರಾಗಿದ್ದಾರೆ. ನೆಪೋಲಿಯನ್ ಬೋನಪಾರ್ಟೆ ಬಳಿಕ ಸರಕಾರದ ಮುಖ್ಯಸ್ಥರಾಗಿ ಆಯ್ಕೆಯಾದ ಅತಿ ಕಿರಿಯ ವ್ಯಕ್ತಿ ಅವರಾಗಿದ್ದಾರೆ.

ಈ ಚುನಾವಣೆಯ ವರೆಗೆ ಅವರ ಬಗ್ಗೆ ಹೆಚ್ಚಿನವರಿಗೆ ಏನೂ ಗೊತ್ತಿರಲಿಲ್ಲ. ಅವರು ಈ ಹಿಂದೆ ಒಮ್ಮೆ ಫ್ರಾನ್ಸ್‌ನ ಹಣಕಾಸು ಸಚಿವರಾಗಿದ್ದನ್ನು ಹೊರತುಪಡಿಸಿದರೆ, ರಾಜಕೀಯದಲ್ಲಿ ಹೆಚ್ಚಿನ ಅನುಭವವನ್ನೂ ಹೊಂದಿದವರಲ್ಲ.

‘‘ನಮ್ಮನ್ನು ದುರ್ಬಲಗೊಳಿಸುತ್ತಿರುವ ವಿಭಜನೆಗಳ ವಿರುದ್ಧ ನನ್ನ ಎಲ್ಲ ಶಕ್ತಿಯೊಂದಿಗೆ ಹೋರಾಡುತ್ತೇನೆ’’ ಎಂದು ವಿಜಯದ ಘೋಷಣೆ ಬಳಿಕ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮ್ಯಾಕ್ರೋನ್ ಹೇಳಿದರು.


ಮ್ಯಾಕ್ರೋನ್‌ಗೆ 66.1 ಶೇ. ಮತ

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯ ಎರಡನೆ ಸುತ್ತಿನ ಮತದಾನದಲ್ಲಿ ವಿಜಯಿ ಅಭ್ಯರ್ಥಿ ಇಮಾನುಯೆಲ್ ಮ್ಯಾಕ್ರೋನ್ 66.1 ಶೇಕಡ ಮತಗಳನ್ನು ಪಡೆದರೆ, ಅವರ ಎದುರಾಳಿ ತೀರಾ ಬಲಪಂಥೀಯ ಅಭ್ಯರ್ಥಿ ಮರೀನ್ ಲೆ ಪೆನ್ 33.9 ಶೇಕಡ ಮತಗಳನ್ನು ಗಳಿಸಿದ್ದಾರೆ.
ಫ್ರಾನ್ಸ್ ಆಂತರಿಕ ಸಚಿವಾಲಯ ಸೋಮವಾರ ಅಂತಿಮ ಫಲಿತಾಂಶವನ್ನು ಹೊರಡಿಸಿದೆ.

ಮ್ಯಾಕ್ರೋನ್ 2,07,53,797 ಮತಗಳನ್ನು ಪಡೆದರೆ, ಪೆನ್ 1,06,44,118 ಮತಗಳನ್ನು ಪಡೆದರು.


ಮೂರನೆ ಒಂದು ಮತದಾರರಿಂದ ಮತ ಹಾಳು

ರವಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೂರನೆ ಒಂದರಷ್ಟು ಫ್ರೆಂಚ್ ಮತದಾರರು ಸ್ವತಂತ್ರ ಅಭ್ಯರ್ಥಿ ಇಮಾನುಯೆಲ್ ಮ್ಯಾಕ್ರೋನ್ ಅಥವಾ ತೀರಾ ಬಲಪಂಥೀಯ ಅಭ್ಯರ್ಥಿ ಮರೀನ್ ಲೆ ಪೆನ್‌ರನ್ನು ಆಯ್ಕೆ ಮಾಡಲು ನಿರಾಕರಿಸಿದ್ದಾರೆ.

ಅದಕ್ಕಾಗಿ ಮತದಾರರು ಒಂದೋ ಮತದಾನ ಮಾಡಲು ಹೋಗಿಲ್ಲ ಅಥವಾ ತಮ್ಮ ಮತ ಪತ್ರಗಳನ್ನು ನಿರುಪಯುಕ್ತಗೊಳಿಸಿದ್ದಾರೆ.   ಮತದಾನದಿಂದ ಹೊರಗುಳಿದವರು 25.44 ಶೇಕಡ. ಇದು 1969ರ ಅಧ್ಯಕ್ಷೀಯ ಚುನಾವಣೆಯ ಬಳಿಕದ ಅವಧಿಯ ಅತ್ಯಧಿಕ ಪ್ರಮಾಣವಾಗಿದೆ.

ಅದೂ ಅಲ್ಲದೆ, ಮತದಾರರು ತಮ್ಮ ಮತಪತ್ರಗಳನ್ನು ಖಾಲಿ ಬಿಟ್ಟಿದ್ದಾರೆ ಅಥವಾ ಅಸಿಂಧುಗೊಳಿಸಿದ್ದಾರೆ.

ಮುಂದಿರುವ ಸವಾಲುಗಳು

‘ಎಲೈಸೀ ಅರಮನೆ’ (ಅಧ್ಯಕ್ಷೀಯ ಕಾರ್ಯಾಲಯ)ಗಾಗಿ ನಡೆದ ಸಮರವನ್ನು ಇಮಾನುಯೆಲ್ ಮ್ಯಾಕ್ರೋನ್ ಜಯಿಸಿರಬಹುದು, ಆದರೆ, ಅಧಿಕಾರ ಸ್ವೀಕರಿಸಿದ ಬಳಿಕ ಅವರು ಅಗಾಧ ಸವಾಲುಗಳನ್ನು ಎದುರಿಸಲಿದ್ದಾರೆ.

ಈಗಾಗಲೇ ಆಳವಾಗಿ ವಿಭಜನೆಗೊಂಡಿರುವ ದೇಶವನ್ನು ಅವರು ಜೋಡಿಸಬೇಕಾಗಿದೆ ಹಾಗೂ ನಿರುದ್ಯೋಗವನ್ನು ಹೋಗಲಾಡಿಸಬೇಕಾಗಿದೆ. ಹಿನ್ನಡೆ ಅನುಭವಿಸಿರುವ ಐರೋಪ್ಯ ಒಕ್ಕೂಟವನ್ನು ಸುಧಾರಣೆಯ ದಾರಿಯಲ್ಲಿ ಕೊಂಡೊಯ್ಯಬೇಕಾದ ಹೊಣೆಗಾರಿಕೆ ಅವರ ಮೇಲಿದೆ.

ಆದರೆ, ಅದಕ್ಕೂ ಮುನ್ನ ಮುಂದಿನ ತಿಂಗಳು ನಡೆಯಲಿರುವ ಸಂಸದೀಯ ಚುನಾವಣೆಯಲ್ಲಿ ಬಹುಮತ ಪಡೆಯಬೇಕಾದ ತುರ್ತು ಅವಶ್ಯಕತೆ ಅವರ ಮುಂದಿದೆ.

ಹಿಂಸಾಚಾರ: 141 ಬಂಧನ

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇಮಾನುಯೆಲ್ ಮ್ಯಾಕ್ರೋನ್ ವಿಜಯಿಯಾದ ಬಳಿಕ ಪ್ಯಾರಿಸ್‌ನಲ್ಲಿ ರವಿವಾರ ರಾತ್ರಿ ಹಿಂಸಾಚಾರ ಸಂಭವಿಸಿದ್ದು, ಪೊಲೀಸರು 141 ಮಂದಿಯನ್ನು ಬಂಧಿಸಿದ್ದಾರೆ.

ರವಿವಾರ ಅಧಿಕಾರ ಸ್ವೀಕಾರ

ಫ್ರಾನ್ಸ್‌ನ ನೂತನ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರಿಗೆ ರವಿವಾರ ಅಧಿಕಾರ ಹಸ್ತಾಂತರಿಸಲಾಗುವುದು ಎಂದು ನಿರ್ಗಮನ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಸೋಮವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News