ಕೇಜ್ರಿವಾಲ್ ವಿರುದ್ಧದ ಆರೋಪದಿಂದ ದುಃಖವಾಗಿದೆ: ಅಣ್ಣಾ ಹಝಾರೆ
ಹೊಸದಿಲ್ಲಿ,ಮೇ 8: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ವಿರುದ್ಧ ಎದ್ದಿರುವ ಭ್ರಷ್ಟಾಚಾರ ಆರೋಪ ದುಃಖ ತರಿಸಿದೆ ಎಂದು ಲೋಕ್‌ಪಾಲ್ ಹೋರಾಟದ ನಾಯಕ ಅಣ್ಣಾ ಹಝಾರೆ ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಧ್ವನಿಯೆಬ್ಬಿಸಿ ಕೇಜ್ರಿವಾಲ್ ದಿಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ತಲುಪಿದರು. ಅಂತಹ ಓರ್ವ ವ್ಯಕ್ತಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವುದು ಖೇದಕರವೆಂದು ಹಝಾರೆ ವಿಷಾದ ವ್ಯಕ್ತಪಡಿಸಿದ್ದಾರೆ.
ಅದೇವೇಳೆ, ಬಲವಾದ ಪುರಾವೆ ನೀಡದೆ ಕೇಜ್ರಿವಾಲ್ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಹೇಳಿದರೆ ನಂಬಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್‌ರೊಂದಿಗೆ ಮುನಿಸಿಕೊಂಡು ಸ್ವರಾಜ್ ಇಂಡಿಯ ಸ್ಥಾಪಿಸಿದ ಯೋಗೇಂದ್ರ ಯಾದವ್ ಹೇಳಿದರು. ಕೇಜ್ರಿವಾಲ್ ರಾಜಕೀಯ ಅವಕಾಶ ವಾದಿಯೆಂದು,
ಅಹಂಕಾರಿಯೆಂದು ಹೇಳಿದರೆ ನಾವು ನಂಬಬಹುದು. ಆದರೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿದ್ದಕ್ಕೆ ಪುರಾವೆ ಇದ್ದರೆ ಮಾತ್ರ ನಂಬಲು ಸಾಧ್ಯವೆಂದು ಯೋಗೇಂದ್ರ ಯಾದವ್ ಹೇಳಿದರು. ಹಝಾರೆಯವರ ಹೇಳಿಕೆಯನ್ನು ತಳ್ಳಿಹಾಕಿರುವ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಪತ್ರಕರ್ತ ಆಶೀಷ್ ಖೇತಾನ್, ಆಧಾರರಹಿತ ಆರೋಪಗಳಿಗೆ ಕೇಜ್ರಿವಾಲ್ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದಿದ್ದಾರೆ. ಕೇಜ್ರಿವಾಲ್ ಭ್ರಷ್ಟಾಚಾರ ನಡೆಸಿದ್ದಾರೆಂದು ಊಹಿಸಲು ಕೂಡಾ ಸಾಧ್ಯವಿಲ್ಲ, ಇದನ್ನು ವೈರಿಗಳು ಕೂಡಾ ನಂಬಲಾರರು ಎಂದು ಖೇತಾನ್ ಅಭಿಪ್ರಾಯಿಸಿದ್ದಾರೆ.