×
Ad

​ಉದ್ಯಮಿ ಜಗದೀಶ್ ಶೆಟ್ಟಿ ಮರವೂರು ನಿಧನ

Update: 2017-05-08 17:29 IST

ಮಂಗಳೂರು, ಮೇ 8: ಖ್ಯಾತ ಉದ್ಯಮಿ ಪಾಪ್ಯುಲರ್ ಜಗದೀಶ್ ಶೆಟ್ಟಿ ಮರವೂರು (68) ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ, ಬಂಧು, ಮಿತ್ರರನ್ನು ಅಗಲಿದ್ದಾರೆ. ನಾಲ್ಕೈದು ದಿನಗಳಿಂದ ಅನಾರೋಗ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಇಂದು ಬೆಳಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಹಠಾತ್ ಹೃದಯ ನೋವು ಕಾಣಿಸಿಕೊಂಡಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲೇ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದರು ಎಂದು ಮೂಲಗಳು ತಿಳಿಸಿವೆ.

ಹಿಂದೂ-ಮುಸ್ಲಿಂ ಸೌಹಾರ್ದದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಬಜ್ಪೆ ವಲಯ ಮಟ್ಟದಲ್ಲಿ ಸೌಹಾರ್ದ ಸಮಿತಿಯೊಂದನ್ನು ಸ್ಥಾಪಿಸಿ ಈ ಸಮಿತಿಯ ಮೂಲಕ ಹಲವು ಪ್ರಕರಣಗಳನ್ನು ರಾಜಿ ಪಂಚಾಯತಿಗೆಯಲ್ಲಿ ಇತ್ಯರ್ಥಗೊಳಿಸಿದ್ದರು. ಠಾಣೆಯ ಮೆಟ್ಟಿಲೇರಿದ್ದ ಕೆಲವು ಪ್ರಕರಣಗಳು ಇವರ ನೇತೃತ್ವದಲ್ಲೇ ಇತ್ಯರ್ಥಗೊಳ್ಳುತ್ತಿದ್ದವು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಕೊಡುಗೈ ದಾನಿಯಾಗಿದ್ದ ಅವರು, ತಾನು ಶಿಕ್ಷಣದಿಂದ ವಂಚಿತನಾಗಿದ್ದರೂ ಇತರರಿಗೆ ಆ ಕೊರತೆ ಕಾಡದಂತೆ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಬಜ್ಪೆಯಲ್ಲಿ ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಿ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಿದರು ಎನ್ನುತ್ತಾರೆ ಸ್ಥಳೀಯರು.

ಪಾಪ್ಯುಲರ್ ಎಂಬ ಹೆಸರಿನಲ್ಲಿ ಮುಂಬೈಯಲ್ಲಿ ಎರಡು ಹೊಟೇಲ್‌ಗಳನ್ನು ಹೊಂದಿದ್ದ ಅವರು, 1986-87ರಲ್ಲಿ ಮಂಗಳೂರಿನ ಮರವೂರಿಗೆ ಆಗಮಿಸಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News