×
Ad

ಪ್ರಾಕೃತಿಕ ಸಮತೋಲನಕ್ಕಾಗಿ ‘ಬೀಜ ಚೆಂಡು’!: ವಿಕಾಸ್ ಕಾಲೇಜಿನಿಂದ ವಿನೂತನ ಕಾರ್ಯಕ್ರಮ

Update: 2017-05-08 18:25 IST

ಮಂಗಳೂರು, ಮೇ 8: ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಂಡು ಹಸಿರು ಪರಿಸರಕ್ಕೆ ಉತ್ತೇಜನ ನೀಡುವ ಸಲುವಾಗಿ ನಗರದ ವಿಕಾಸ್ ಪದವಿ ಪೂರ್ವ ಕಾಲೇಜು ವಿನೂತನ ಪದ್ಧತಿಯನ್ನು ಅನುಸರಿಸಲು ಮುಂದಾಗಿದೆ.

ಕಾಲೇಜಿನ ಇಕೊ ಕ್ಲಬ್‌ನ ಚಟುವಟಿಕೆಯ ಭಾಗವಾಗಿ ದೇಶೀ ಹಸುಗಳ ಸೆಗಣಿ, ಗಂಜಲ, ಬೀಜ ಮತ್ತು ಕೆಂಪು ಮಣ್ಣನ್ನು ಉಪಯೋಗಿಸಿ ಸೀಡ್ ಬಾಲ್ (ಬೀಜ ಚೆಂಡು)ಗಳನ್ನು ತಯಾರಿಸುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮರ ಗಿಡಗಳನ್ನು ಕಡಿದಿರುವ ಜಾಗದಲ್ಲಿ ಬೀಜದಿಂದ ಕೂಡಿದ ಈ ಕಿರಿದಾದ ಚೆಂಡಿನಾಕಾರದ ಬೀಜ ಚೆಂಡುಗಳನ್ನು ನೆಲದಲ್ಲಿ ಬಿತ್ತುವುದು ಈ ಕಾರ್ಯಕ್ರಮವಾಗಿದೆ. ಈ ರೀತಿ ಸಾವಯವ ಪದ್ಧತಿಯಲ್ಲಿ ಮಣ್ಣಿನೊಳಗೆ ಬೀಜವನ್ನು ತುಂಬಿ ಚೆಂಡಿನಾಕಾರದಲ್ಲಿ ನೆಲದಲ್ಲಿ ಬಿತ್ತುವುದರಿಂದ ಬೀಜವು ಬಿಸಿಲು, ಮಳೆ, ಗಾಳಿಯಿಂದ ಹಾನಿಗೊಳಗಾಗುವುದು ಅಥವಾ ಪ್ರಾಣಿ, ಪಕ್ಷಿ, ಕೀಟಗಳ ಆಹಾರವಾಗುವುದನ್ನು ತಪ್ಪಿಸಬಹುದಾಗಿದೆ.

ಬೀಜ ಚೆಂಡು ತಯಾರಿಕೆಯ ಸಂದರ್ಭ ವಿಕಾಸ್ ಕಾಲೇಜಿನ ವಿದ್ಯಾರ್ಥಿಗಳು ಸುಮಾರು 7,000ದಷ್ಟು ವಿವಿಧ ಜಾತಿಯ ಹಣ್ಣುಹಂಪಲು ಹಾಗೂ ಇತರ ಗಿಡಗಳ ಬೀಜಗಳಿಂದ ಕೂಡಿದ ಚೆಂಡುಗಳನ್ನು ತಯಾರಿಸಿದರು. ಒಣಗಿದ ಬಳಿಕ ಗೋಣಿಚೀಲದಲ್ಲಿ ಈ ಚೆಂಡುಗಳನ್ನು ಸಂಗ್ರಹಿಸಡಲಾಯಿತು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಆಯ್ದ ಸ್ಥಳಗಳಲ್ಲಿ ಬೀಜ ಚೆಂಡುಗಳನ್ನು ಬಿತ್ತಲು ನಿರ್ಧರಿಸಲಾಗಿದೆ.

ಬೀಜ ಚೆಂಡು ತಯಾರಿಕಾ ಕಾರ್ಯಕ್ರಮದ ಸಂದರ್ಭ ಕಾಲೇಜಿನ ಸಲಹೆಗಾರ ಡಾ. ಅನಂತ ಪ್ರಭು, ಪ್ರಾಂಶುಪಾಲ ರಾಜಾರಾಂ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಆಯೆಷಾ, ಉತ್ತಿಷ್ಠ ಭಾರತ ಸಂಸ್ಥೆಯ ನೀರಜ್ ಕಾಮತ್ ಮತ್ತು ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News