ಶಿವಪಾಲ್ ನಿಷ್ಠರು ಸೇರಿದಂತೆ ಐವರನ್ನು ಎಸ್‌ಪಿಯಿಂದ ಉಚ್ಚಾಟಿಸಿದ ಅಖಿಲೇಶ್
ಹೊಸದಿಲ್ಲಿ,ಮೇ 8: ಚಿಕ್ಕಪ್ಪ ಶಿವಪಾಲ್ ಯಾದವ ಅವರ ನಿಷ್ಠರು ಸೇರಿದಂತೆ ಐವರು ಎಸ್‌ಪಿ ನಾಯಕರನ್ನು ಅಖಿಲೇಶ್ ಯಾದವ ಅವರು ಪಕ್ಷದಿಂದ ಉಚ್ಚಾಟಿಸಿದ್ದಾರೆ. ತನ್ನ ಹಿರಿಯ ಸೋದರ ಮುಲಾಯಂ ಸಿಂಗ್ ಯಾದವ ನೇತೃತ್ವದಲ್ಲಿ ಸಮಾಜವಾದಿ ಜಾತ್ಯತೀತ ಮೋರ್ಚಾ ಹೆಸರಿನಲ್ಲಿ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸುವುದಾಗಿ ಶಿವಪಾಲ್ ಕಳೆದ ವಾರ ಪ್ರಕಟಿಸಿದ್ದರು.
ಶಿವಪಾಲ್‌ರ ನಿಕಟವರ್ತಿ ದೀಪಕ್ ಮಿಶ್ರಾ, ಪಕ್ಷದ ಮಾಜಿ ವಕ್ತಾರ ಮುಹಮ್ಮದ್ ಶಾಹಿದ್, ರಾಜೇಶ ಯಾದವ, ರಮೇಶ ಯಾದವ ಮತ್ತು ಕುಲ್ಲು ಯಾದವ ಅವರನ್ನು ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಪಕ್ಷಾಧ್ಯಕ್ಷ ಅಖಿಲೇಶ್ ಉಚ್ಚಾಟಿಸಿದ್ದಾರೆ ಎಂದು ಎಸ್‌ಪಿ ರಾಜ್ಯಾಧ್ಯಕ್ಷ ನರೇಶ ಉತ್ತಮ್ ತಿಳಿಸಿದರು.
ಶಿವಪಾಲ್ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಅಖಿಲೇಶ್,ಹೆಚ್ಚು ‘ಜಾತ್ಯತೀತ ರಾಜಕೀಯ ’ವನ್ನು ತಾನು ಸ್ವಾಗತಿಸುತ್ತೇನೆ. ಅದು ಯಾವ ರೂಪ ತಳೆಯುತ್ತದೆಯೋ ತನಗೆ ಗೊತ್ತಿಲ್ಲ. ಎಸ್‌ಪಿ ಬಗ್ಗೆ ಹೇಳುವುದಾದರೆ ಅದು ಪ್ರತಿಯೊಂದೂ ಪರೀಕ್ಷೆಯನ್ನು ಗೆದ್ದಿದೆ ಮತ್ತು ಅದನ್ನು ಮುಂದುವರಿಸಲಿದೆ ಎಂದು ಹೇಳಿದರು.