ಇಎಂವಿಗಳಿಗೆ ವಿವಿಪಿಎಟಿ ಸಾಧನ ಅಳವಡಿಕೆ: ಪ್ರಮಾಣಪತ್ರ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಮೇ 8: ವಿದ್ಯುನ್ಮಾನ ಮತಯಂತ್ರ(ಇಎಂವಿ)ದಲ್ಲಿ ಬಳಸುವ ಮತದಾರರ ಪ್ರಾತ್ಯಕ್ಷಿಕೆ ವ್ಯವಸ್ಥೆಯನ್ನು ಖರೀದಿಸಲು ಕೇಂದ್ರ ಸರಕಾರದಿಂದ ಪಡೆಯಲಾಗಿರುವ ಮೊತ್ತದ ವಿವರವನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ್ ಮತ್ತು ಎಸ್.ಅಬ್ದುಲ್ ನಝೀರ್ ಅವರನ್ನೊಳಗೊಂಡ ಪೀಠವೊಂದು ಈ ನಿರ್ದೇಶನ ನೀಡಿದೆ.
ವಿದ್ಯುನ್ಮಾನ ಮತಯಂತ್ರಗಳಿಗೆ 3,174 ಕೋಟಿ ರೂ. ವೆಚ್ಚದಲ್ಲಿ ಮತದಾರರ ಪ್ರಾತ್ಯಕ್ಷಿಕೆ ಸಾಧನ (ವಿವಿಪಿಎಟಿ)ವನ್ನು ಅಳವಡಿಸುವ ಚುನಾವಣಾ ಆಯೋಗದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ಅಂಗೀಕಾರ ನೀಡಿತ್ತು.
ಈ ಕುರಿತಾದ ಮಾಧ್ಯಮದ ವರದಿಯನ್ನು ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ಪರ ವಕೀಲರಾದ ಪಿ.ಚಿದಂಬರಂ ನ್ಯಾಯಾಲಯದ ಗಮನಕ್ಕೆ ತಂದರು. ಇಂತಹ ಸಾಧನ ಅಳವಡಿಸಿದ ಮತಯಂತ್ರಗಳನ್ನು ಯಾವಾಗ ಚುನಾವಣೆಯಲ್ಲಿ ಬಳಸಲಾಗುತ್ತದೆ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಿಳಿಸಲಿ ಎಂದು ಅವರು ಕೋರಿದರು.
ವಿವಿಪಿಎಟಿ ವ್ಯವಸ್ಥೆ ಅಳವಡಿಸಲು ಬೇಕಿರುವ ಮೊತ್ತವನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತಿಳಿಸಿದರು.
ಆದರೆ ಅವರು (ಅರ್ಜಿದಾರರು) ಎಷ್ಟು ಮೊತ್ತ ಬಿಡುಗಡೆಗೊಳಿಸಲಾಗಿದೆ ಮತ್ತು ಯಾವಾಗ ಈ ಸಾಧನವನ್ನು ಅಳವಡಿಸಲಾಗುವುದು ಎಂಬ ವಿವರ ಕೇಳುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ನ್ಯಾಯಾಲಯಕ್ಕೆ ಅಫಿದಾವಿತ್(ಪ್ರಮಾಣಪತ್ರ) ಸಲ್ಲಿಸಬೇಕು ಎಂದು ನ್ಯಾಯಾಲಯದ ಪೀಠವು ತಿಳಿಸಿತು. ಜುಲೈ ಮೂರನೇ ವಾರದಲ್ಲಿ ವಿಷಯವನ್ನು ದಾಖಲಿಸಬೇಕು ಮತ್ತು ಈ ಅವಧಿಯಲ್ಲಿ ಪ್ರತಿ ಅಫಿದಾವಿತ್ ಸಲ್ಲಿಸಬೇಕು ಎಂದು ಪೀಠವು ಸೂಚಿಸಿತು.
ಉ.ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ಮಾಯಾವತಿ ನೇತೃತ್ವದ ಬಿಎಸ್ಪಿ, ಇಎಂವಿಗಳನ್ನು ತಿರುಚಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ವಿವಿಪಿಎಟಿ ಸಾಧನ ಅಳವಡಿಸದ ಇಎಂವಿ ನಂಬಿಕೆಗೆ ಅರ್ಹವಲ್ಲ . ದೇಶದಲ್ಲಿರುವ ಸುಮಾರು 3 ಲಕ್ಷ ಇಎಂವಿಗಳಿಗೆ ವಿವಿಪಿಎಟಿ ಸಾಧನ ಅಳವಡಿಸಲು ಸುಮಾರು 3000 ಕೋಟಿ ರೂ. ವೆಚ್ಚವಾಗಲಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.