×
Ad

ಅಂತಾರಾಷ್ಟ್ರೀಯ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ದೇಶದ ಕೀರ್ತಿಪತಾಕೆ ಹಾರಿಸಿದ ಉಪ್ಪಿನಂಗಡಿಯ ಗ್ರಾಮೀಣ ಪ್ರತಿಭೆಗಳು

Update: 2017-05-08 21:20 IST

ಉಪ್ಪಿನಂಗಡಿ, ಮೇ 8: ಅಮೇರಿಕದ ಟೆಕ್ಸಾಸ್ - ಹ್ಯೂಸ್ಟನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ‘ಐ ಸ್ವೀಪ್’ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಜಿಲ್ಲೆಯ ಉಪ್ಪಿನಂಗಡಿಯ ಗ್ರಾಮೀಣ ಪ್ರದೇಶದ ಬಾಲಕರಿಬ್ಬರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿಸಿದ್ದಾರೆ.

ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಾದ ಎ.ಯು. ನಚಿಕೇತ್ ಕುಮಾರ್ ಹಾಗೂ ಅಮಾನ್ ಕೆ.ಎ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮಿಂಚಿದ ಬಾಲಕರು.

ಭೂಮಿಗೂ, ಮಾನವನಿಗೂ ಅಪಾಯಕಾರಿಯೆನಿಸಿರುವ ರಬ್ಬರ್ ಶೀಟ್ ತಯಾರಿಕೆಯಲ್ಲಿ ಬಳಸಲ್ಪಡುವ ಆ್ಯಸಿಡ್ ಬದಲಾಗಿ ಪ್ರಾಕೃತಿಕವಾಗಿ ದೊರೆಯುವ, ಮುಖ್ಯವಾಗಿ ಉಪ್ಪಿನಕಾಯಿ ಹಾಗೂ ಸಾಂಬಾರ ಪದಾರ್ಥಕ್ಕೆ ಉಪಯೋಗಿಸಲ್ಪಡುವ "ಬಿಂಬುಳಿ" ಎಂಬ ಹಣ್ಣಿನ ರಸವನ್ನು ಬಳಸಿ ರಬ್ಬರ್ ಶೀಟ್ ತಯಾರಿಸಬಹುದು ಎಂಬ ಸಂಶೋಧನೆಯನ್ನು ಶಿಕ್ಷಕಿ ನಿಶಿತಾರ ಸಹಕಾರದೊಂದಿಗೆ ಈ ವಿದ್ಯಾರ್ಥಿಗಳು ಮಂಡಿಸಿದ್ದರು.

ಈ ಸಂಶೋಧನೆಯು ಪುತ್ತೂರಿನಲ್ಲಿ ನಡೆದ ವಿಭಾಗೀಯ ಮಟ್ಟದಲ್ಲೂ, ರಾಜ್ ಕೋಟ್ ನಲ್ಲಿ ನಡೆದ ರಾಷ್ಟ್ರ ಮಟ್ಟದಲ್ಲೂ ಚಿನ್ನದ ಪದಕ ಗಳಿಸಿ ಅಮೆರಿಕಾದಲ್ಲಿ ನಡೆಯಲಿದ್ದ ‘ಐ ಸ್ವೀಪ್ -2017’ ಎಂಬ ವಿಜ್ಞಾನ ಸಂಶೋಧನಾ ಸ್ಪರ್ಧಾ ಕಣಕ್ಕೆ ಆಯ್ಕೆಗೊಂಡಿತ್ತು. ಭಾರತದ ಪ್ರಖ್ಯಾತ ವಿಜ್ಞಾನಿಗಳಾದ ನಾರಾಯಣ ಅಯ್ಯರ್ ಹಾಗೂ ಹರೀಶ್ ಭಟ್ ಮಾರ್ಗದರ್ಶನದಂತೆ ಸಂಶೋಧನೆಯನ್ನು ಉನ್ನತ ಮಟ್ಟದಲ್ಲಿ ಪ್ರಯೋಗಕ್ಕೆ ಒಳಪಡಿಸಿ ಮಂಗಳೂರಿನ ನಿವೃತ್ತ ರಸಾಯನ ಶಾಸ್ತ್ರ ಉಪನ್ಯಾಸಕ ಜಯಂತ್ ಸಹಕಾರದೊಂದಿಗೆ ವಿಭಿನ್ನ ಸ್ತರದ ಪ್ರಯೋಗಗಳನ್ನು ನಡೆಸಿದ್ದರು. ನಂತರ ವಿಸ್ತೃತ ಮಟ್ಟದ ಸಂಶೋಧನಾ ವರದಿಯನ್ನು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧಾ ಕಣವಾಗಿದ್ದ "ಐ ಸ್ವೀಪ್"ನಲ್ಲಿ ಮಂಡಿಸಲಾಗಿತ್ತು.

ಆರ್ಥಿಕವಾಗಿಯೂ ಲಾಭದಾಯಕವೆನಿಸಿದ, ಪ್ರಕೃತಿಯಲ್ಲಿ ಸುಲಭವಾಗಿ ಲಭಿಸುವ, ರಬ್ಬರ್ ಕೃಷಿಕರ ಪಾಲಿಗೆ ಆರೋಗ್ಯ ರಕ್ಷಕವಾಗಿದ್ದ ಬಿಂಬುಳಿ ( ಆಂಗ್ಲ ಬಾಷೆಯಲ್ಲಿ ಬಿಲಿಂಬಿ ) ಎಂಬ ಹಣ್ಣಿನ ರಸವನ್ನು ಬಳಸಿ ಗುಣಮಟ್ಟದಲ್ಲೂ ಉತ್ತಮವಾಗಿರುವ ರಬ್ಬರ್ ಶೀಟ್ ತಯಾರಿಸಬಹುದೆಂಬ ಈ ವಿದ್ಯಾರ್ಥಿಗಳ ಪ್ರಯೋಗ ತೀರ್ಪುಗಾರರ ಗಮನ ಸೆಳೆದು ವಿಭಾಗವಾರು ನೆಲೆಯಲ್ಲಿ ದ್ವಿತಿಯ ಸ್ಥಾನಕ್ಕೆ ಆಯ್ಕೆಯಾಗಿತ್ತು.

ಅಗತ್ಯ ಮಾರ್ಗದರ್ಶನ, ಸಹಾಯ ನೀಡಿದ ವಿದ್ಯಾರ್ಥಿಗಳ ಸಂಶೋಧನೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೋರಿಸಿಕೊಡುವಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ಎ. ನಾಯಕ್ ಹಾಗೂ ಪ್ರಾಂಶುಪಾಲ ರವೀಂದ್ರ ದರ್ಬೆಯವರ ಸಹಕಾರವೂ ಪ್ರಮುಖವಾಗಿತ್ತು.

ಬೆಳ್ಳಿಪದಕ ವಿಜೇತ ವಿದ್ಯಾರ್ಥಿಗಳಾದ ಎ.ಯು. ನಚಿಕೇತ್ ಕುಮಾರ್ ಉಪ್ಪಿನಂಗಡಿಯ ಪತ್ರಕರ್ತ ಯು.ಎಲ್. ಉದಯ್ ಕುಮಾರ್ ಹಾಗೂ ವಿನಯಾ ದಂಪತಿಯ ಮಗನಾಗಿದ್ದು, ಅಮಾನ್ ಕೆ.ಎ. ಪುತ್ತೂರು ಅಗ್ನಿಶಾಮಕ ದಳದಲ್ಲಿ ಉದ್ಯೋಗಿಯಾಗಿರುವ ನಿವೃತ್ತ ಯೋಧ ಅಬ್ದುಲ್ ಅಝೀಝ್ ಹಾಗೂ ಆರೋಗ್ಯ ಇಲಾಖಾ ಉದ್ಯೋಗಿ ರಹ್ಮತ್ ಬೇಗಂ ದಂಪತಿಯ ಪುತ್ರ. ಮಾರ್ಗದರ್ಶಕ ಶಿಕ್ಷಕಿಯಾಗಿರುವ ನಿಶಿತಾ ಪುತ್ತೂರಿನ ದೃಶ್ಯ ಮಾಧ್ಯಮ ವರದಿಗಾರ ಸುಧಾಕರ್‌ರ ಪತ್ನಿ.

‘ನಿರೀಕ್ಷೆ ಇನ್ನೂ ಇತ್ತು’: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬೆಳ್ಳಿ ಪದಕ ಗಳಿಸಿದ ಬಗ್ಗೆ ವಿಜೇತ ವಿದ್ಯಾರ್ಥಿಗಳಾದ ನಚಿಕೇತ್ ಕುಮಾರ್ ಎ.ಯು. ಹಾಗೂ ಅಮಾನ್‌ರವರನ್ನು ಮಾತನಾಡಿಸಿದಾಗ, "ಗ್ರಾಮೀಣ ಭಾಗದ ವಿದ್ಯಾರ್ಥಿಗಳಾದ ನಾವು ಅಮೆರಿಕಾದಲ್ಲಿ ಜಗತ್ತಿನ ವಿವಿಧೆಡೆಗಳಿಂದ ಬಂದ ಸ್ಪರ್ಧಾಳುಗಳಿಗೆ ಪೈಪೋಟಿ ನೀಡಿ ಬೆಳ್ಳಿ ಪದಕ ಗಳಿಸಿರುವುದು ಸಂತಸ ತಂದಿದೆ. ಆದರೆ ನಮ್ಮ ಮಾರ್ಗದರ್ಶಕ ಶಿಕ್ಷಕಿ ನಿಶಿತಾ, ನಮ್ಮ ವಿದ್ಯಾ ಸಂಸ್ಥೆಯ ಸಂಚಾಲಕರಾದ ಯು.ಎಸ್.ಎ. ನಾಯಕ್ ಹಾಗೂ ಪ್ರಾಂಶುಪಾಲ ರವೀಂದ್ರ ದರ್ಬೆಯವರು ಗ್ರ್ಯಾಂಡ್ ಗೋಲ್ಡ್ ವಿನ್ನರ್ ಆಗಿ ಬರಬೇಕೆಂಬ ನಿಟ್ಟಿನಲ್ಲಿ ಪ್ರೋತ್ಸಾಹಿಸಿದ್ದರು. ನಮ್ಮ ಅತೀವ ಶ್ರಮದ ಹೊರತಾಗಿಯೂ ನಿರೀಕ್ಷೆ ತಲುಪದ ಬಗ್ಗೆ ಸಣ್ಣ ನಿರಾಶೆ ಇದೆ. ಆದರೂ ನಮ್ಮ ಈ ಗೆಲುವನ್ನು ನಮ್ಮನ್ನು ಪ್ರೋತ್ಸಾಹಿಸಿದ ಇಂದ್ರಪ್ರಸ್ಥ ವಿದ್ಯಾಲಯಕ್ಕೆ ಸಮರ್ಪಿಸುತ್ತೇವೆ" ಎಂದರು.

"ಪ್ರಯೋಗಕ್ಕೆ ಸಹಕರಿಸಿದ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ್, ಸುಳ್ಯ ಕೆ.ವಿ.ಜಿ. ಕಾಲೇಜಿನ ಡಾ. ಮನುಜೇಶ್ , ಪುತ್ತೂರು ವಿವೇಕಾನಂದ ಕಾಲೇಜಿನ ವಿಜ್ಞಾನ ವಿಬಾಗದ ಹಾಗೂ ಮಂಗಳೂರು ದೇರಳಕಟ್ಟೆ ಮೆಡಿಕಲ್ ಕಾಲೇಜಿನ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಮಂಗಳೂರಿನ ನಿವೃತ್ತ ಉಪನ್ಯಾಸಕ ಜಯಂತ್ ಸೇರಿದಂತೆ ಹಲವರ ಮಾರ್ಗದರ್ಶನ ಸಹಕಾರ ನಮ್ಮನ್ನು ಈ ಮಟ್ಟಕ್ಕೆ ಏರಿಸಿದೆ. ನಮ್ಮ ಪ್ರಯೋಗಕ್ಕೆ ಅತ್ಯಗತ್ಯವಾದ ರಬ್ಬರ್ ಹಾಲನ್ನು ಕೇಳಿದಾಗಲೆಲ್ಲಾ ನೀಡಿ ಪ್ರೋತ್ಸಾಹಿಸಿದ ಇಳಂತಿಲದ ಉಮೇಶ್ ಖಂಡಿಗರವರ ಸಹಕಾರ ಮರೆಯುವಂತಿಲ್ಲ. ಬಿಂಬುಲಿ ಹಣ್ಣನ್ನು ಕೂಡಾ ನಮಗಿತ್ತು ಪ್ರೋತ್ಸಾಹಿಸಿದವರು ಹಲವರು. ಅವರೆಲ್ಲಾ ಸಹಕಾರ, ಹೆತ್ತವರ ಹಾಗೂ ಕುಟುಂಬ ವರ್ಗದವರ ಪ್ರೋತ್ಸಾಹ, ಹಾರೈಕೆಯ ಫಲವಾಗಿ ಬೆಳ್ಳಿ ಪದಕ ಪ್ರಾಪ್ತವಾಗಿದೆ" ಎಂದು ಅಮಾನ್ ಹಾಗೂ ನಚಿಕೇತ್ ಹೇಳುತ್ತಾರೆ.

ಸಂಸ್ಥೆಯ ಕೀರ್ತಿ ಎತ್ತರಕ್ಕೇರಿದೆ: ಯು.ಎಸ್.ಎ. ನಾಯಕ್
"26 ವರ್ಷಗಳಿಂದ ಗ್ರಾಮಿಣ ಭಾಗದ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಅನಾವರಣಗೊಳಿಸಬೇಕೆಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಕನಸನ್ನು ನನಸಾಗಿಸಿದ ವಿದ್ಯಾರ್ಥಿಗಳಿಬ್ಬರ ಹಾಗೂ ಮಾರ್ಗದರ್ಶಕ ಶಿಕ್ಷಕಿಯ ಸಾಧನೆ ಅತೀವ ಖುಷಿ ತಂದಿದೆ. ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾ ವಿಕಾಸಕ್ಕೆ ನೀಡಲಾಗುವ ವಿಶೇಷ ಒತ್ತನ್ನು ಈ ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಸಾಧನೆ ಮೆರೆದಿದ್ದಾರೆ. ರಾಷ್ಟ್ರವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ತಂದಿತ್ತು, ನಮ್ಮ ವಿದ್ಯಾ ಸಂಸ್ಥೆಗೆ ಕೀರ್ತಿ ತಂದಿರುವ ಈ ತಂಡದ ಬಗ್ಗೆ ಅಭಿಮಾನ ಮೂಡಿದೆ" ಎಂದು ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ಎ. ನಾಯಕ್ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News