×
Ad

ಬೈಕ್ ಮೇಲೆ ಮರದ ಗೆಲ್ಲು ಬಿದ್ದು ಸವಾರನಿಗೆ ಗಾಯ

Update: 2017-05-08 21:33 IST

ಉಪ್ಪಿನಂಗಡಿ, ಮೇ 8: ಮರದ ಬೃಹತ್ ಗೆಲ್ಲೊಂದು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್‌ನ ಮೇಲೆ ಬಿದ್ದು, ಸವಾರ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಉಪ್ಪಿನಂಗಡಿ ಬಳಿಯ ಪಂಜಳದಲ್ಲಿ ನಡೆದಿದೆ.

ಶಿರಾಡಿ ನಿವಾಸಿ ಶಾಜಿ ಗಾಯಗೊಂಡ ಬೈಕ್ ಸವಾರ. ಶಿರಾಡಿಯಿಂದ ಉಪ್ಪಿನಂಗಡಿಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಶಾಜಿಯವರು ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಂಜಳದಲ್ಲಿ ಹೆದ್ದಾರಿಯಂಚಿನಲ್ಲಿದ್ದ ಮಹಾಗಣಿ (ಮಾಗಣಿ) ಮರದ ಗೆಲ್ಲೊಂದು ಏಕಾಏಕಿ ಮುರಿದಿದ್ದು,  ಶಾಜಿ ಚಲಾಯಿಸುತ್ತಿದ್ದ ಬೈಕ್ ನ ಮೇಲೆ ಬಿದ್ದಿದೆ. ಘಟನೆಯಿಂದ ಶಾಜಿಯವರಿಗೆ ಗಾಯಗಳಾಗಿದ್ದು, ಗೆಲ್ಲಿನಲ್ಲಿ ಸೊಪ್ಪು ಹೆಚ್ಚಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ, ಹೆದ್ದಾರಿಯಲ್ಲಿದ್ದ ಮರದ ಗೆಲ್ಲನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಅಪಾಯಕಾರಿ ಮರ ತೆರವಿಗೆ ಮೌನ ಯಾಕೆ?: ಹೆದ್ದಾರಿಯಂಚಿನಲ್ಲಿ ಹಲವು ಅಪಾಯಕಾರಿ ಮರಗಳಿದ್ದು, ಕಳೆದ ಒಂದು ವರ್ಷದಿಂದ ಗ್ರಾಮಸಭೆ, ಜನಸಂಪರ್ಕ ಸಭೆ ಸಹಿತ ಹತ್ತು ಹಲವು ಸಭೆಗಳಲ್ಲಿ ಈ ಬಗ್ಗೆ ಅಧಿಕಾರಿಗಳ ಗಮನಸೆಳೆದು ಅದರ ತೆರವಿಗೆ ಒತ್ತಾಯಿಸಿದರೂ, ಅರಣ್ಯ ಅಧಿಕಾರಿಗಳು ಸಾರ್ವಜನಿಕರ ಕೂಗಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಹೆದ್ದಾರಿಯಂಚಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ತಿಳಿಸುವಾಗ ಕಾನೂನು, ಪರಿಸರ ರಕ್ಷಣೆಯ ಕಾಳಜಿಯನ್ನು ಮುಂದಿಡುವ ಅರಣ್ಯಾಧಿಕಾರಿಗಳು ಸರಕಾರಿ ರಕ್ಷಿತಾರಣ್ಯದಲ್ಲಿ ಮರಗಳ ಲೂಟಿ ನಡೆದರೆ ಸುಮ್ಮನಿರುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News