×
Ad

ಭ್ರಷ್ಟಾಚಾರದ ಸ್ಪೋಟಕ ಆರೋಪಕ್ಕೆ ಕೊನೆಗೂ ಮೌನ ಮುರಿದ ಕೇಜ್ರಿವಾಲ್ ಹೇಳಿದ್ದೇನು ?

Update: 2017-05-08 21:36 IST

 ಹೊಸದಿಲ್ಲಿ, ಮೇ 8: ಸತ್ಯ ಗೆಲ್ಲಲಿದೆ.. ನಾಳೆ ನಡೆಯಲಿರುವ ದಿಲ್ಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಆರಂಭಗೊಳ್ಳುತ್ತದೆ - ಎಂಬ ಗೂಢಾರ್ಥದ ಹೇಳಿಕೆಯನ್ನು ಟ್ವೀಟ್ ಮಾಡುವ ಮೂಲಕ ತನ್ನ ವಿರುದ್ಧ ಕೇಳಿ ಬಂದಿರುವ ಲಂಚದ ಆರೋಪಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ತಣ್ಣಗಿನ ಪ್ರತಿಕ್ರಿಯೆ ನೀಡಿದ್ದಾರೆ.
  ಇದಕ್ಕೂ ಮುನ್ನ ಲಂಚದ ಆರೋಪ ಮಾಡಿರುವ ಕಪಿಲ್ ಮಿಶ್ರಾಗೆ ಮಾತಿನ ಇದಿರೇಟು ನೀಡಿರುವ ‘ಆಪ್’ನ ಹಿರಿಯ ಮುಖಂಡ ಸತ್ಯೇಂದ್ರ ಜೈನ್, ಉಚ್ಛಾಟಿಸಲ್ಪಟ್ಟಿರುವ ಕಪಿಲ್ ಮಿಶ್ರ ಮಾನಸಿಕ ಸ್ಥಿಮಿತ ಕಳಕೊಂಡಿದ್ದಾರೆ. ನನ್ನ ಮತ್ತು ಕೇಜ್ರೀವಾಲ್ ಮಧ್ಯೆ ಯಾವುದೇ ಒಪ್ಪಂದ ನಡೆದಿಲ್ಲ. ನಿನ್ನೆಯಿಂದ ಗಮನಿಸುತ್ತಿದ್ದೇನೆ- ಕಪಿಲ್ ಎಷ್ಟು ಸುಳ್ಳು ಹೇಳುತ್ತಿದ್ದಾರೆ ಎಂದು. ನಾನು ಮುಖ್ಯಮಂತ್ರಿ ಜೊತೆ ಇರಲೇ ಇಲ್ಲ. ಮೂರ್ಖತನಕ್ಕೆ ಮತ್ತು ಸುಳ್ಳು ಹೇಳುವುದಕ್ಕೂ ಒಂದು ಮಿತಿಯಿದೆ. ಆದರೆ ಕಪಿಲ್ ಎಲ್ಲಾ ಮಿತಿಗಳನ್ನೂ ಮೀರಿದ್ದಾರೆ ಎಂದಿದ್ದಾರೆ.
ಕಪಿಲ್ ವಿರುದ್ದ ಜೈನ್ ಮಾನನಷ್ಟ ಮೊಕದ್ದಮೆ ಹೂಡುವ ಸಾಧ್ಯತೆಗಳಿವೆ ಎಂದು ಜೈನ್ ನಿಕಟವರ್ತಿಯೋರ್ವರು ತಿಳಿಸಿದ್ದಾರೆ.
 ಕೇಜ್ರೀವಾಲ್ ವಿರುದ್ಧ ಕೇಳಿ ಬಂದಿರುವ ಆರೋಪದಿಂದ ತನಗೆ ತುಂಬಾ ನೋವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ತಿಳಿಸಿದ್ದಾರೆ. ಲಂಚ ಪಡೆದವರನ್ನು ನೇಣಿಗೇರಿಸಬೇಕು ಎಂದು ಈ ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು. ಆಗ ಸತ್ಯ ಹೊರಬೀಳಲಿದೆ ಎಂದು ಅವರು ಆಗ್ರಹಿಸಿದ್ದಾರೆ.
       ಈ ಮಧ್ಯೆ , ಕಪಿಲ್ ಮಿಶ್ರಾರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವುದಾಗಿ ಆಪ್ ಪಕ್ಷದ ರಾಜಕೀಯ ವ್ಯವಹಾರ ಸಮಿತಿ ತಿಳಿಸಿದೆ. ಕೇಜ್ರೀವಾಲ್ ವಿರುದ್ಧ ಲಂಚದ ಆರೋಪ ಮಾಡಿದ್ದ ಕಪಿಲ್ ಮಿಶ್ರ, ಮಂಗಳವಾರ ಸಿಬಿಐಯನ್ನು ಸಂಪರ್ಕಿಸಿ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ. ಪಕ್ಷದ ಮುಖಂಡರ ವಿರುದ್ಧದ ಟೀಕೆ ಮುಂದುವರಿಸಿದ ಮಿಶ್ರ, ಕೇಜ್ರೀವಾಲ್ ಅವರ ಸಂಬಂಧಿಯೋರ್ವರ 50 ಕೋಟಿ ವೌಲ್ಯದ ಭೂಮಿಯ ಬಗೆಗಿದ್ದ ವಿವಾದವನ್ನು ಬಗೆಹರಿಸಲು ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನೆರವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಲೋಕೋಪಯೋಗಿ ಸಚಿವರೂ ಆಗಿರುವ ಅವರು ತಮ್ಮ ಇಲಾಖೆಯಿಂದ 10 ಕೋಟಿ ರೂ.ಯಷ್ಟು ಮೊತ್ತದ ನಕಲಿ ಬಿಲ್‌ಗಳ ಮೊತ್ತವನ್ನು ಕೇಜ್ರೀವಾಲ್ ಸಂಬಂಧಿಕರಿಗೆ ಪಾಸ್ ಮಾಡಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ತಾನೋರ್ವ ಬಿಜೆಪಿ ಏಜೆಂಟ್ ಎಂಬ ಟೀಕೆಯನ್ನು ತಳ್ಳಿಹಾಕಿರುವ ಕಪಿಲ್ ಮಿಶ್ರ, ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಸುಳ್ಳು ಪತ್ತೆಹಚ್ಚುವ ಪರೀಕ್ಷೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.
    ಕೇಜ್ರೀವಾಲ್ 400 ಕೋಟಿ ರೂ. ಮೊತ್ತದ ಟ್ಯಾಂಕರ್ ಹಗರಣದ ತನಿಖೆಯನ್ನು ವಿಳಂಬಗೊಳಿಸಿದ್ದರು ಎಂದು ತಾನು ಮಾಡಿರುವ ಆರೋಪಕ್ಕೆ ಪೂರಕವಾಗಿ ಕೆಲವು ದಾಖಲೆಗಳನ್ನು ಸೋಮವಾರ ಕಪಿಲ್ ಮಿಶ್ರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ಒಪ್ಪಿಸಿದ್ದಾರೆ. ಮಿಶ್ರಾ ಅವರ ಹೇಳಿಕೆ ದಾಖಲಿಸಿಕೊಂಡ ಬಳಿಕ ಕಾನೂನು ತನ್ನದೇ ದಾರಿಯಲ್ಲಿ ಸಾಗಲಿದೆ  ಎಂದು ದಿಲ್ಲಿ ಎಸಿಬಿ ಮುಖ್ಯಸ್ಥ ಎಂ.ಕೆ.ಮೀನ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News