×
Ad

​ತಮ್ಮನ ಕೊಲೆ: ಅಣ್ಣ- ಅತ್ತಿಗೆಯ ಬಂಧನ

Update: 2017-05-08 21:38 IST

ಕಾರ್ಕಳ, ಮೇ 8: ಕುಕ್ಕುಂದೂರು ಕಜೆ ಎಂಬಲ್ಲಿ ಮೇ 7ರಂದು ತಮ್ಮನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ ಅಣ್ಣ ಮತ್ತು ಅತ್ತಿಗೆಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ಕೊಲೆಗೀಡಾದವರನ್ನು ಕುಕ್ಕುಂದೂರಿನ ಐವನ್ ಡಿಸೋಜ(25) ಎಂದು ಗುರುತಿಸಲಾಗಿದೆ. ಮೃತರ ಅಣ್ಣ ಸ್ಟೀವನ್ ವಾಂಡೀಸ್ ಡಿಸೋಜ(32) ಹಾಗೂ ಅವರ ಪತ್ನಿ ಮೋನಿಕಾ(26) ಬಂಧಿತ ಆರೋಪಿಗಳು.

ಐವನ್ ಡಿಸೋಜ ಪ್ರತಿದಿನ ಮದ್ಯ ಸೇವಿಸಿ ಮನೆಗೆ ಬಂದು ತನ್ನ ಅಣ್ಣ ಮತ್ತು ಅತ್ತಿಗೆಯೊಂದಿಗೆ ವಿನಾಕಾರಣ ಜಗಳವಾಡುತ್ತಿದ್ದನು. ಇದೇ ರೀತಿ ಮೇ 7ರಂದು ಮದ್ಯ ಸೇವಿಸಿ ಮನೆಗೆ ಬಂದ ಐವನ್ ಡಿಸೋಜ ಅಣ್ಣನಲ್ಲಿ ಹಣಕ್ಕಾಗಿ ಜಗಳವಾಡಿದ್ದ. ಆಗ ಇಬ್ಬರ ನಡುವೆ ಹೊಡೆದಾಟ ನಡೆದು ಸ್ಟೀವನ್ ಚೂರಿಯಿಂದ ಐವನ್ ಡಿಸೋಜನ  ಹೊಟ್ಟೆಗೆ ತಿವಿದಿದ್ದಾನೆ.

ಐವನ್ ಗಾಯದಿಂದ ಸುರಿದ ರಕ್ತವನ್ನು ಬಟ್ಟೆಯಿಂದ ಒರೆಸಿದ ದಂಪತಿ ಚೂರಿ ಮತ್ತು ಬಟ್ಟೆಯನ್ನು ಎಸೆದು ಸಾಕ್ಷ್ಯ ನಾಶ ಮಾಡಿದ್ದು, ನಂತರ ಐವನ್ ರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಐವನ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತದೇಹವನ್ನು ದಂಪತಿಗೆ ನೀಡಲು ಒಪ್ಪದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು.

ಈ ಬಗ್ಗೆ ಪರಿಶೀಲಿಸಿದ ಪೊಲೀಸರು ಸ್ಟೀವನ್‌ನನ್ನು ನಿನ್ನೆ ಸಂಜೆಯೇ ಬಂಧಿಸಿದರು. ಕೊಲೆಯಲ್ಲಿ ಭಾಗಿಯಾಗಿರುವ ಮತ್ತು ಸಾಕ್ಷ ನಾಶ ಮಾಡಿರುವ ಅವರ ಪತ್ನಿ ಮೋನಿಕಾಳನ್ನು ಇಂದು ಬಂಧಿಸಲಾಯಿತು. ಇವರಿಬ್ಬರನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಐವನ್ ಡಿಸೋಜ ಊರಿನಲ್ಲಿ ಪೈಂಟಿಂಗ್ ಹಾಗೂ ಇತರ ಕೆಲಸ ಮಾಡು ತ್ತಿದ್ದನು. ದುಬೈಯಲ್ಲಿದ್ದ ಸ್ಟೀವನ್ ಒಂದು ವರ್ಷದ ಹಿಂದೆ ಊರಿಗೆ ಮರಳಿ ದ್ದನು. ಮತ್ತೆ ಗಲ್ಫ್ ದೇಶಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದನು. ಕೊಲೆ ಆರೋಪಿ ದಂಪತಿಗೆ ಮಕ್ಕಳಿಲ್ಲ. ಈ ಬಗ್ಗೆ ಮೃತರ ಮಾವ ವಿಕ್ಟರ್ ಲೊಬೋ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News