ಬಿಜೆಪಿ ಶಾಸಕನ ಕಚೇರಿ ಮೇಲಿನ ದಾಳಿ ಎಂದು ಆಧಾರರಹಿತ ಸುದ್ದಿ ಪ್ರಕಟಿಸಿದ ಮಾಧ್ಯಮಗಳು
ತಿರುವನಂತಪುರ,ಮೇ 8: ‘‘ಕೇರಳದ ಬಿಜೆಪಿ ಶಾಸಕ ಒ.ರಾಜಗೋಪಾಲ ಅವರ ಕಚೇರಿಯ ಮೇಲೆ ದಾಳಿ ’’ ಹೀಗೆಂದು ರವಿವಾರವಿಡೀ ಕೆಲವು ಮಲಯಾಳಂ ಸುದ್ದಿವಾಹಿನಿಗಳು ಗಂಟಲು ಹರಿದುಕೊಳ್ಳುತ್ತಲೇ ಇದ್ದವು. ಬಿಜೆಪಿಯೇತರ ರಾಜ್ಯಗಳಿಂದ ನಕಾರಾತ್ಮಕ ಸುದ್ದಿಗಳಿಗಾಗಿ ತಡಕಾಡುತ್ತಿದ್ದ, ಹೊಸದಾಗಿ ಆರಂಭಗೊಂಡಿರುವ ಅರ್ನಾಬ್ ಗೋಸ್ವಾಮಿಯವರ ರಿಪಬ್ಲಿಕ್ ಟಿವಿ ಕೂಡ ಈ ರೇಸ್‌ಲ್ಲಿ ಹಿಂದುಳಿದಿರಲಿಲ್ಲ. ಬಿಜೆಪಿ ಶಾಸಕನ ಕಚೇರಿಯ ಮೇಲೆ ದಾಳಿ ನಡೆದಿದೆ ಎಂದು ಅದು ಬೆಳಿಗ್ಗೆಯಿಂದಲೇ ಬೊಂಬಡಾ ಬಜಾಯಿಸುತ್ತಿತ್ತು. ಪತ್ರಿಕೋದ್ಯಮದ ದುರಂತದ ಸಂಕೇತವೆಂಬಂತೆ ಇವು ಘಟನೆಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಪೊಲೀಸ್ ಠಾಣೆಗೆ ಒಂದು ದೂರವಾಣಿ ಕರೆಯನ್ನು ಮಾಡುವ ಗೋಜಿಗೂ ಹೋಗಿರಲಿಲ್ಲ!
ಕೇರಳ ವಿಧಾನಸಭೆಯಲ್ಲಿ ಬಿಜೆಪಿಯ ಏಕೈಕ ಶಾಸಕರಾಗಿರುವ ರಾಜಗೋಪಾಲ ತಿರುವನಂತಪುರದ ಕರಮಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಚೇರಿಯನ್ನು ಹೊಂದಿದ್ದಾರೆ. ಎರಡಂತಸ್ತಿನ ಕಟ್ಟಡದ ನೆಲಅಂತಸ್ತಿನಲ್ಲಿ ಶಾಸಕರ ಕಚೇರಿಯಿದ್ದರೆ, ಮೇಲಂತಸ್ತಿನಲ್ಲಿ ಅನಿಲ್ ಎಂಬಾತ ವಾಸವಾಗಿದ್ದಾನೆ.
ಶನಿವಾರ ತಡರಾತ್ರಿ ಗುಂಪೊಂದು ಅನಿಲ್ ಮನೆಗೆ ಬಂದು ಬಾಗಿಲು ತೆರೆಯುವಂತೆ ಜಬರಿಸಿತ್ತು. ಆದರೆ ಆತ ಬಾಗಿಲು ತೆರೆಯದಿದ್ದಾಗ ಗುಂಪು ಕಿಟಕಿಗೆ ಕಲ್ಲುಗಳನ್ನು ತೂರಿ ಹಾನಿಯನ್ನುಂಟು ಮಾಡಿತ್ತು. ಬಳಿಕ ಕೆಳಗೆ ಹೋಗಿ ಅಲ್ಲಿ ನಿಲ್ಲಿಸಿದ್ದ ಆತನ ಕಾರನ್ನು ಜಖಂಗೊಳಿಸಿತ್ತು. ದುಷ್ಕರ್ಮಿಗಳು ಅಲ್ಲಿಂದಲೂ ಕಲ್ಲು ತೂರಾಟ ನಡೆಸಿದ್ದು, ಕೆಲವು ಕಲ್ಲ್ಲುಗಳು ಬಿಜೆಪಿ ಶಾಸಕರ ನಾಮಫಲಕಕ್ಕೆ ಮತ್ತು ಅವರ ಕಚೇರಿಯ ಕಿಟಕಿಗೂ ಬಿದ್ದಿದ್ದವು. ಇಷ್ಟಾದ ಬಳಿಕ ಗುಂಪು ಅಲ್ಲಿಂದ ಕಾಲ್ಕಿತ್ತಿತ್ತು.
ಈ ದಾಳಿಗೆ ರಾಜಕೀಯ ಹಿನ್ನೆಲೆ ಇರುವುದನ್ನು ಕರಮಣ ಪೊಲೀಸರು ನಿರಾಕರಿಸಿದ್ದಾರೆ. ಅನಿಲ್ ಕೆಲವರಿಂದ ಸಾಲ ಪಡೆದಿದ್ದ. ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಕೆಲವು ಹಣಕಾಸು ವಿವಾದದ ಪ್ರಕರಣಗಳು ಬಾಕಿಯಿವೆ. ಈ ದಾಳಿಯ ಹಿಂದೆ ಆತನಿಗೆ ಸಾಲ ನೀಡಿದವರು ಯಾರೋ ಇದ್ದಾರೆ ಎಂಬ ಶಂಕೆಯಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ ತನ್ನ ರಾಜಕೀಯ ಲಾಭ ಗಳಿಕೆಗಾಗಿ ಈ ಘಟನೆಯನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ಚುರುಕಾಗಿತ್ತು. ಆಡಳಿತ ಸಿಪಿಎಂ ಈ ದಾಳಿಗೆ ಹೊಣೆ ಎಂದು ಅದು ಆಪಾದಿಸಿತ್ತು. ರಾಜಗೋಪಾಲ ಅವರಂತೂ ಅನಿಲನ ಕಾರಿನ ಪಕ್ಕವೇ ನಿಂತುಕೊಂಡು ಕಾರಿಗೆ ಏನು ಹಾನಿಯಾಗಿದೆ ಎನ್ನುವುದನ್ನು ವಿವರಿಸುತ್ತಿದ್ದರು. ಅಪ್ಪಿತಪ್ಪಿಯೂ ಇದು ತನ್ನ ಕಾರಲ್ಲ,ಬೇರೆಯವರ ಕಾರು ಎಂದು ಅವರು ಹೇಳಲೇ ಇಲ್ಲ. ಮನೋರಮಾ ಮತ್ತು ಇತರ ವಾಹಿನಿಗಳ ಸುದ್ದಿಗಾರರಾದರೂ ಕಾರು ರಾಜಗೋಪಾಲರದ್ದಲ್ಲ ಎನ್ನುವುದನ್ನು ಸ್ಪಷ್ಟಪಡಿಸಬಹುದಿತ್ತು. ಆದರೆ ಅವರೂ ಆ ಕೆಲಸ ಮಾಡಲಿಲ್ಲ. ಅಲ್ಲದೇ ಈ ಘಟನೆಯ ಬಗ್ಗೆ ಪೊಲಿಸರ ಹೇಳಿಕೆಯನ್ನೂ ಪ್ರಸಾರ ಮಾಡುವ ಗೋಜಿಗೆ ಹೋಗಲಿಲ್ಲ. ಎಲ್ಲ ವಾಹಿನಿಗಳೂ ಹಾಡಿದ್ದೇ ಹಾಡು ಕಿಸಬಾಯಿದಾಸ ಎಂದಂತೆ ಘಟನೆಯ ಕುರಿತು ಬಿಜೆಪಿ ಹೇಳಿದ್ದನ್ನೇ ಪರಮ ಸತ್ಯ ಎಂದುಕೊಂಡು ಅದನ್ನೇ ಪ್ರಸಾರ ಮಾಡುತ್ತಿದ್ದವು ಮತ್ತು ಇದೇ ಸುಳ್ಳು ಸುದ್ದಿ ರಿಪಬ್ಲಿಕ್‌ನಂತಹ ಚಾನೆಲ್‌ಗಳ ಮೂಲಕ ರಾಷ್ಟ್ರವ್ಯಾಪಿ ಪ್ರಸಾರವನ್ನೂ ಪಡೆಯಿತು.
ಒಂದು ಸಣ್ಣ ಪಾಠ
ಬಿಜೆಪಿಯ ಬಗ್ಗೆ ಒಲವು ಹೊಂದಿರುವುದು ತಪ್ಪಲ್ಲ. ಆದರೆ ಪತ್ರಿಕೋದ್ಯಮದ ಮೂಲ ಪಾಠಗಳನ್ನು ಮರೆಯುವುದು ತಪ್ಪು. ಇಂತಹ ಪ್ರಕರಣಗಳನ್ನು ವರದಿ ಮಾಡುವಾಗ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಘಟನೆಯ ಸತ್ಯಾಸತ್ಯತೆಯನ್ನು ಖಚಿತ ಪಡಿಸಿಕೊಳ್ಳುವುದು ಮೊದಲ ಕೆಲಸವಾಗಬೇಕು. ಮತ್ತು ವರದಿ ಮಾಡುವಾಗ ಎಲ್ಲ ಸತ್ಯವನ್ನೂ ಬಹಿರಂಗಗೊಳಿಸಬೇಕು. ಮಾಧ್ಯಮಗಳು ತಮ್ಮ ಅಜೆಂಡಾವನ್ನು ಮುಂದಕ್ಕೊತ್ತಲು ಅರ್ಧ ಸತ್ಯವನ್ನೆಂದೂ ಹೇಳಬಾರದು.