ಇನ್ನೂ ದೊರಕದ ಸಹಾಯಧನ: ಹೋರಾಟಕ್ಕೆ ಅಣಿಯಾದ ಎಂಡೋ ಸಂತ್ರಸ್ತರು
ಕಾಸರಗೋಡು, ಮೇ 8: ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರಧನ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಶಿಫಾರಸು ಹೊರಡಿಸಿ ಏಳು ವರ್ಷಗಳು ಕಳೆದರೂ ಇನ್ನೂ ಅರ್ಧದಷ್ಟು ಸಂತ್ರಸ್ತರಿಗೆ ಪರಿಹಾರ ಧನ ಲಭಿಸಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ನೀಡಿ ನಾಲ್ಕು ತಿಂಗಳು ಕಳೆದರೂ, ಪ್ರತಿಭಟನೆ, ಧರಣಿ ಸತ್ಯಾಗ್ರಹಗಳು ನಡೆಸಿದರೂ ಸರಕಾರ ನೀಡಿದ ಭರವಸೆ ಕೇವಲ ಕಡತಕ್ಕೆ ಮಾತ್ರ ಸೀಮಿತವಾಗಿದೆ. ಈ ಹಿನ್ನೆಲೆಯಲ್ಲಿ ಎಂಡೋ ಸಂತ್ರಸ್ತರು ಮತ್ತೆ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಇದರಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಶಿಫಾರಸಿನಂತೆ ಧನಸಹಾಯ ಲಭಿಸದವರ ಸಮಾವೇಶವನ್ನು ಮೇ 13ರಂದು ಕಾಸರಗೋಡು ಸೇವಾ ಸಹಕಾರಿ ಬ್ಯಾoಕ್ ಸಭಾಂಗಣದಲ್ಲಿ ನಡೆಸಲು ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ ಸಭೆ ತೀರ್ಮಾನಿಸಿದೆ.
ವಿಶೇಷ ವೈದ್ಯಕೀಯ ಶಿಬಿರ ಮೂಲಕ ಗುರುತಿಸಿದ 5,848 ಮಂದಿಯಲ್ಲಿ 2,820 ಮಂದಿಗೆ ಮಾತ್ರ ಸಹಾಯಧನ ಲಭಿಸಿದೆ. ಇದಲ್ಲದೆ ಮೃತ ಸಂತ್ರಸ್ತ ಕುಟುಂಬದ ಆಶ್ರಿತರಿಗೂ ಸಹಾಯಧನ ಲಭಿಸಬೇಕಿದೆ. ಮೃತರ ಆಶ್ರಿತರಿಗೆ ತಲಾ ಐದು ಲಕ್ಷ ರೂ., ಹಾಸಿಗೆಹಿಡಿದ ರೋಗಿಗಳು, ಮಾನಸಿಕ ಅಸ್ವಸ್ಥ ರಿಗೆ ತಲಾ ಐದು ಲಕ್ಷ ರೂ., ಉಳಿದ ರೋಗಿಗಳಿಗೆ ತಲಾ ಮೂರು ಲಕ್ಷ ರೂ. ತುರ್ತಾಗಿ ನೀಡುವಂತೆ ಶಿಫಾರಸು ಮಾಡಲಾಗಿದ್ದು, ಎಂಟು ವಾರಗಳ ಅವಧಿಯಲ್ಲಿ ಪರಿಹಾರ ಧನ ನೀಡುವಂತೆ ಆದೇಶ ನೀಡಲಾಗಿತ್ತು.
2010ರಲ್ಲಿ ಗುರುತಿಸಿದ 4182 ಮಂದಿಯಲ್ಲಿ 2453 ಸಂತ್ರಸ್ತರಿಗೆ ತಲಾ ಐದು ಲಕ್ಷ ರೂ., 1729 ಮಂದಿಗೆ ತಲಾ ಮೂರು ಲಕ್ಷ ರೂ. ನೀಡುವುದಾಗಿ 2012ರ ಜನವರಿ 12ರಂದು ಸರಕಾರ ಆದೇಶ ಹೊರಡಿಸಿತ್ತು. ಕೊನೆಗೆ ಹೋರಾಟದ ಫಲವಾಗಿ ಅರ್ಧದಷ್ಟು ಪರಿಹಾರ ಧನ ವಿತರಿಸಲು ಸರಕಾರ ಮುಂದಾಗಿತ್ತು. ತಿರುವನಂತಪುರದ ಸಚಿವಾಲಯದ ಮುಂಭಾಗದಲ್ಲಿ ಸಂತ್ರಸ್ತ ಕುಟುಂಬದ ತಾಯಂದಿರು ನಡೆಸಿದ ಉಪವಾಸ ಧರಣಿಯ ನಂತರ 2016 ಫೆಬ್ರವರಿ 3ರಂದು ಸರಕಾರ ನೀಡಿದ ಭರವಸೆಯಂತೆ ಎಲ್ಲಾ ಸಂತ್ರಸ್ತರಿಗೂ ಧನಸಹಾಯ ಲಭಿಸಬೇಕಿತ್ತು. ಆದರೆ ಇನ್ನೂ ಅರ್ಧಕ್ಕಿಂತಲೂ ಅಧಿಕ ಸಂತ್ರಸ್ತರು ಪರಿಹಾರ ಧನ ಲಭಿಸದೆ ಹೊರಗುಳಿದಿದ್ದಾರೆ .
ಈ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಮುನಿಸಾ ಅಂಬಲತ್ತರ ಅಧ್ಯಕ್ಷತೆ ವಹಿಸಿದ್ದರು. ಅಂಬಿಕಾಸುತಾನ್ ಮಾಂಗಾಡ್, ಪಿ.ಮುರಳೀಧರನ್ , ಮಿಶ್ರಿಯಾ ಬಿ., ಅಶೋಕ್ ರಾಯ್ , ಸಿಬಿ ಅಲೆಕ್ಸ್, ಟಿ. ಕೆ ಗೋವಿಂದನ್ , ಅಬ್ದುಲ್ ಖಾದರ್ ಚಟ್ಟಂಚಾಲ್, ಅಂಬಲತ್ತರ ಕುಞಿಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು .