ಫ್ಯಾಕ್ಟರಿ ಗೇಟ್ ಬಿದ್ದು ಮ್ಯಾನೇಜರ್ ಮೃತ್ಯು
Update: 2017-05-08 23:01 IST
ಬ್ರಹ್ಮಾವರ, ಮೇ 8: ಬಾರಕೂರಿನ ಕೆಮಿಕಲ್ ಫ್ಯಾಕ್ಟರಿಯ ಕಬ್ಬಿಣದ ಗೇಟು ಮೈಮೇಲೆ ಬಿದ್ದ ಪರಿಣಾಮ ಆ ಸಂಸ್ಥೆಯ ಮ್ಯಾನೇಜರೊಬ್ಬರು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ.
ಮೃತರನ್ನು ಹಾಸನ ಮೂಲದ ನಾಗೇಶ್(22) ಎಂದು ಗುರುತಿಸಲಾಗಿದೆ. ಕೋಟದಲ್ಲಿರುವ ಮಾವನ ಮನೆಯಲ್ಲಿ ಉಳಿದುಕೊಂಡಿದ್ದ ಇವರು ಅಂಬಲಪಾಡಿ ಸುರೇಶ್ ಶೆಟ್ಟಿ ಎಂಬವರ ಬಾರಕೂರಿನಲ್ಲಿರುವ ವೆಸ್ಟರ್ನ್ ಮೆಟ ಕೆಮ್ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ನಿನ್ನೆ ರಾತ್ರಿ ಗೇಟನ್ನು ಎಳೆಯುವಾಗ ಅದು ಆಕಸ್ಮಿಕವಾಗಿ ನಾಗೇಶ್ ಅವರ ಮೈಮೇಲೆ ಬಿತ್ತು ಎನ್ನಲಾಗಿದೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಬೆಳಗ್ಗೆ 9 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯರೊಬ್ಬರು ಈ ವಿಷಯವನ್ನು ಸಂಬಂಧಪಟ್ಟವರಿಗೆ ತಿಳಿಸಿದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.