ವಿದ್ಯಾರ್ಥಿ ವೇತನ ಬಿಡುಗಡೆ ಮಾಡದ ಸರಕಾರದ ವಿರುದ್ಧ ಸಿಎಫ್‌ಐ ಪ್ರತಿಭಟನೆ
ಮಂಗಳೂರು, ಮೇ 8: ಕಳೆದ ಶೈಕ್ಷಣಿಕ ವರ್ಷದಲ್ಲಿನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಬಿಡುಗಡೆ ಮಾಡದ ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ವತಿಯಿಂದ ಸೋಮವಾರ ನಗರದ ಎ.ಬಿ.ಶೆಟ್ಟಿ ವೃತ್ತದಿಂದ ಅಲ್ಪಸಂಖ್ಯಾತರ ಭವನದವರೆಗೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಕಿರ್, 2016-17ನೆ ಸಾಲಿನ ರಾಷ್ಟ್ರೀಯ ವಿದ್ಯಾರ್ಥಿ ವೇತನ ಯೋಜನೆಯಡಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಅಲ್ಪಸಂಖ್ಯಾತರ ಪರ ಎಂದು ಹೇಳುವ ಸರಕಾರ ವಿದ್ಯಾರ್ಥಿ ವೇತನ ಬಿಡುಗಡೆ ಮಾಡದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಮುಂದಿನ ಶನಿವಾರದೊಳಗೆ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡದಿದ್ದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಸಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಅತಾವುಲ್ಲಾ, ಮಂಗಳೂರು ನಗರ ಕಾರ್ಯದರ್ಶಿ ಸುಹೇಲ್ ಬಂದರ್, ಜಿಲ್ಲಾ ಸಮಿತಿ ಸದಸ್ಯರಾದ ರಿಯಾಝ್, ಸಾದಿಕ್ ಪುತ್ತೂರು ಉಪಸ್ಥಿತರಿದ್ದರು.