ಜಲೀಲ್ ಕರೋಪಾಡಿ ಕೊಲೆ ಪ್ರಕರಣ: ದಿನೇಶ್ ಶೆಟ್ಟಿ ಬಂಧನಕ್ಕೆ ಜಲೀಲ್ ತಂದೆ ಉಸ್ಮಾನ್ ಕರೋಪಾಡಿ ಒತ್ತಾಯ

Update: 2017-05-09 07:47 GMT

ಮಂಗಳೂರು, ಮೇ 9: ಕರೋಪಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಎ. ಅಬ್ದುಲ್ ಜಲೀಲ್‌ರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ಪೊಲೀಸರು ನಡೆಸುತ್ತಿರುವ ತನಿಖೆ ತೃಪ್ತಿಕರವಾಗಿಲ್ಲ. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸಬೇಕು ಎಂದು ಹಾಜಿ ಎ. ಉಸ್ಮಾನ್ ಕರೋಪಾಡಿ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ತಮ್ಮ ಪುತ್ರನ ಹೆಸರು ಹೇಳುತ್ತಲೇ ಕೆಲ ಕ್ಷಣ ಭಾವುಕರಾದ ಉಸ್ಮಾನ್ ಹಾಜಿ, ತಮ್ಮ ಪುತ್ರನ ಕೊಲೆಗೆ ಕಾರಣವಾಗಿರುವ ಮೂಲ ವ್ಯಕ್ತಿ ಹಾಗೂ ಸೂತ್ರಧಾರರನ್ನು ಇನ್ನೂ ದಸ್ತಗಿರಿ ಮಾಡಿಲ್ಲ ಎಂದು ಬೇಸರಿಸಿದರು.

ಐಜಿಪಿಯವರು ಇತ್ತೀಚೆಗೆ ಪತ್ರಿಕಾಗೋಷ್ಠಿಯ ಸಂದರ್ಭವೂ ದಿನೇಶ್ ಶೆಟ್ಟಿಯ ಹೆಸರನ್ನು ಹೇಳಿದ್ದರು. ಎಡಿಜಿಪಿ ಅಲೋಕ್ ಕುಮಾರ್‌ ಕೂಡಾ ದಿನೇಶ್ ಶೆಟ್ಟಿ ಬಂಧನಕ್ಕೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. ಆದರೆ ಎಸ್ಪಿಯವರು ಮಾತ್ರ ಆತ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದಾನೆಂದು ಸಚಿವರಿಗೆ ಹೇಳಿಕೆ ನೀಡಿದ್ದಾರೆ. ಆದರೆ ಆತ ಊರಲ್ಲೇ ಇದ್ದು ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಮೇ 2ರಂದು ಗೃಹಸಚಿವ ಡಾ. ಪರಮೇಶ್ವರ್ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಗೃಹ ಸಚಿವರ ಭೇಟಿಯಿಂದಲೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಉಸ್ಮಾನ್ ಕರೋಪಾಡಿ ಅಸಮಾಧಾನ ವ್ಯಕ್ತಪಡಿಸಿದರು.

ದಿನೇಶ್ ಶೆಟ್ಟಿ ಹಾಗೂ ಸಹಚರರ ಬಂಧನಕ್ಕೆ ಒತ್ತಾಯ: ಜಲೀಲ್ ಕರೋಪಾಡಿ ಹತ್ಯೆಗೆ ದಿನೇಶ್ ಶೆಟ್ಟಿಯೇ ಪ್ರಮುಖ ಕಾರಣ ಎಂದು ಆರೋಪಿಸಿದ ಉಸ್ಮಾನ್ ಕರೋಪಾಡಿ, ಆತ ಮತ್ತು ಆತನ ಸಹಚರರ ಬಂಧನಾಗಬೇಕು ಎಂದು ಒತ್ತಾಯಿಸಿದರು.

2015ರ ಗ್ರಾಪಂ ಚುನಾವಣೆಯ ಸಂದರ್ಭ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ್ ಶೆಟ್ಟಿ ಆಕಾಂಕ್ಷಿಯಾಗಿದ್ದು, ಆತ ಭೂಗತ ಪಾತಕಿ ವಿಕ್ಕಿಶೆಟ್ಟಿಯ ಸಂಬಂಧಿ. ವಿಕ್ಕಿ ಶೆಟ್ಟಿ ಕೂಡಾ ತನ್ನ ಸಂಬಂಧಿ ದಿನೇಶ್ ಶೆಟ್ಟಿಯನ್ನು ಬೆಂಬಲಿಸಿ, ಈ ಬಗ್ಗೆ ತನಗೂ ವಿದೇಶದಿಂದ ಕರೆ ಮಾಡಿ ದಿನೇಶ್ ಶೆಟ್ಟಿಗೆ ಉಪಾಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೊಂಡಿದ್ದ. ಆ ನಿರ್ಧಾರ ಮಾಡುವುದು ಪಕ್ಷದ ವರಿಷ್ಠರು ಎಂದು ತಾನು ಹೇಳಿದ್ದೆ. ಆ ಸಂದರ್ಭ ವಿಕ್ಕಿ ಶೆಟ್ಟಿ ಬೆದರಿಕೆಯ ಮಾತುಗಳನ್ನಾಡಿದ್ದ. ಇದಾದ ಬಳಿಕ ಪಂಚಾಯತ್‌ನ ಅಧ್ಯಕ್ಷೆಯ ಪತಿಗೂ ಕರೆ ಮಾಡಿ ದಿನೇಶ್ ಶೆಟ್ಟಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಸಹಕರಿಸಬೇಕೆಂದು ಕೋರಿಕೊಂಡಿದ್ದ. ಈ ಬಗ್ಗೆ ಎಲ್ಲಾ ರೀತಿಯ ಸಾಕ್ಷ್ಯ ಹಾಗೂ ವಿವರಗಳನ್ನು ನೀಡಲಾಗಿದ್ದರೂ ತನಿಖೆಯಲ್ಲಿ ಪ್ರಗತಿಯಾಗಿಲ್ಲ.

ಇಷ್ಟು ಮಾತ್ರವಲ್ಲದೆ, ಇತ್ತೀಚೆಗೆ ಐಜಿಪಿಯವರ ಜತೆ ಪ್ರಕರಣದ ಬಗ್ಗೆ ಮಾತನಾಡಿದಾಗ, "ಈ ಕೊಲೆ ನಡೆಸಲು ಐದು ಲಕ್ಷ ರೂ.ಗಳ ಸುಪಾರಿ ನೀಡಲಾಗಿತ್ತು. ಅದರಲ್ಲಿ ಕೇವಲ 40 ಸಾವಿರ ರೂ.ಗಳನ್ನು ಮಾತ್ರವೇ ನೀಡಲಾಗಿದೆ" ಎಂಬ ಮಾತನ್ನೂ ಹೇಳಿದ್ದಾರೆ. ಹಾಗಾದರೆ ಆ 40,000 ರೂ. ಯಾರು ನೀಡಿರುವುದು ಎಂಬುದು ಪೊಲೀಸರಿಗೆ ತಿಳಿದಿರಬೇಕಲ್ಲವೇ? ಹಾಗಿದ್ದರೂ ನೈಜ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಾಕೆ ಆಸಕ್ತಿ ತೋರಿಸುತ್ತಿಲ್ಲ ಎಂದವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಅಧ್ಯಕ್ಷೆ ಬೇಬಿ ಆರ್. ಶೆಟ್ಟಿ, ಕೆ.ಪಿ. ಸೀತಾರಾಂ ಭಟ್, ವನಜಾ ಶೆಟ್ಟಿ, ಅಲ್ಫೋನ್ಸ್ ಲಿಗೋರಿ ಡಿಸೋಜ ಉಪಸ್ಥಿತರಿದ್ದರು.

ಮುಂದಿನ ವಾರ ಮುಖ್ಯಮಂತ್ರಿಯ ಭೇಟಿ: ಪ್ರಕರಣದ ತನಿಖೆಯಲ್ಲಿ ಸರಕಾರದ ನಿಷ್ಕ್ರಿಯತೆಯೂ ಎದ್ದು ಕಾಣುತ್ತಿದೆ. ಈ ಬಗ್ಗೆ ಮುಂದಿನ ವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಪ್ರಕರಣದ ಸೂಕ್ತ ತನಿಖೆ ನಡೆಸಿ ತನ್ನ ಪುತ್ರನಿಗೆ ನ್ಯಾಯ ಒದಗಿಸಲು ಆಗ್ರಹಿಸುವುದಾಗಿ ಉಸ್ಮಾನ್ ಕರೋಪಾಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News