×
Ad

12ರಂದು "ಸೊಫಿಯಾ" ಕೊಂಕಣಿ ಚಿತ್ರ ಬಿಡುಗಡೆ

Update: 2017-05-09 16:17 IST

ಮಂಗಳೂರು, ಮೇ 9: ಬಹುನಿರೀಕ್ಷಿತ ಕೊಂಕಣಿ ಚಲನಚಿತ್ರ ಸೊಫಿಯಾ ಮೇ 12ರಂದು ಕರಾವಳಿಯಲ್ಲಿ ಬಿಡುಗಡೆ ಕಾಣಲಿದೆ. ಮಂಗಳೂರಿನ ಪ್ರಭಾತ್, ಸಿನಿಪೋಲಿಸ್, ಬಿಗ್ ಸಿನಿಮಾದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕಿ ಜಾನೆಟ್ ನೊರೆನ್ಹಾ ಹೇಳಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಮಂಗಳೂರಿನಲ್ಲಿ ಬಿಡುಗಡೆ ಮಾಡಿದ ಬಳಿಕ ನಂತರದ ದಿನಗಳಲ್ಲಿ ಕಾರ್ಕಳ, ಮೂಡುಬಿದಿರೆ, ಉಡುಪಿ, ಮಣಿಪಾಲ, ಬೆಂಗಳೂರು,ಗೋವಾ, ಮುಂಬೈ, ಮಧ್ಯಪ್ರಾಚ್ಯ ದೇಶಗಳ ಜತೆಗೆ ಇಸ್ರೇಲ್, ಯುಕೆಯಲ್ಲಿ ಬಿಡುಗಡೆಯಾಗಲಿದೆ ಎಂದರು.

ಚಿತ್ರದ ತಾರಾಗಣದಲ್ಲಿ ಬಹುಭಾಷಾ ನಟಿ ಎಸ್ತೆರ್ ನೊರೊನ್ಹಾ ಇದ್ದಾರೆ. ಎಸ್ತೆರ್ ಈ ಹಿಂದೆ ಕನ್ನಡ, ತುಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕರಾಗಿ ಎಲ್ಟನ್ ಮಸ್ಕರೇನಸ್ ಹಾಗೂ ಶೆಲ್ಟನ್ ಕ್ರಾಸ್ತಾ ಕಾಣಿಸಿಕೊಂಡಿದ್ದಾರೆ. ಗೋವಾದ ಖ್ಯಾತ ಹಾಸ್ಯ ಕಲಾವಿದ ಪ್ರಿನ್ಸ್ ಜೇಕಬ್ ಸೇರಿದಂತೆ ರಿಚರ್ಡ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿರುವುದರಿಂದ ಚಿತ್ರದ ಗುಣಮಟ್ಟದಲ್ಲಿ ಕೊಂಕಣಿ ಚಿತ್ರಗಳಲ್ಲಿಯೇ ಉನ್ನತ ಮಟ್ಟದಲ್ಲಿದೆ ಎಂದರು.

ಉಡುಪಿಯ ಫಲಿಮಾರು, ಬೆಳ್ಮಣ್ಣು, ಕಲ್ಯಾಣಪುರ ಸೇರಿದಂತೆ ಮುಂಬೈ, ಚಿಕ್ಕಮಗಳೂರಿನಲ್ಲಿ ಸರಿಸುಮಾರು 21 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. 70 ಲಕ್ಷ ರೂ.ಗಳಲ್ಲಿ ಸಿದ್ಧವಾದ ಸೊಫಿಯಾ ಪಕ್ಕಾ ಕೌಟುಂಬಿಕ ಆಧಾರಿತ ಸಿನಿಮಾ. ಅದರಲ್ಲೂ ಕರಾವಳಿಯ ಜನ ಇಷ್ಟಪಡುವಂತಹ ಕತೆಯನ್ನು ಚಿತ್ರದಲ್ಲಿ ಹೆಣೆಯಲಾಗಿದೆ.

ಚಿತ್ರದ ನಾಯಕ ಎಲ್ಟನ್ ಮಾತನಾಡಿ, ಚಿತ್ರವನ್ನು ಜಾನೆಟ್ ನೊರೊನ್ಹಾ ಪ್ರೊಡಕ್ಷನ್ ಮಂಗಳೂರು ಬ್ಯಾನರ್‌ನಲ್ಲಿ ಜಾನೆಟ್ ನೊರೊನ್ಹಾ ನಿರ್ಮಾಣ ಮಾಡಿದ್ದಾರೆ. ಕೋಸ್ಟಲ್‌ವುಡ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ನಿರ್ಮಾಪಕಿಯೊಬ್ಬರು ಈ ಚಿತ್ರದ ಮೂಲಕ ಹೊರಬಂದಿದ್ದಾರೆ. ‘ನಶಿಬಾಸೋ ಖೆಳ್’ ಖ್ಯಾತಿಯ ಬಾಲಿವುಡ್ ನಿರ್ದೇಶಕ ಹೆರಿ ಫೆರ್ನಾಂಡೀಸ್ ಬಾರ್ಕೂರು ಈ ಚಿತ್ರಕ್ಕೆ ನಿರ್ದೇಶನದ ಜತೆಯಲ್ಲಿ ಕತೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ಕೂಡ ಬರೆದಿದ್ದಾರೆ.

ಚಿತ್ರಕ್ಕೆ ಸಾಹಿತ್ಯವನ್ನು ಆನ್ಸಿ ಡಿಸೋಜ ಪಾಲಡ್ಕಾ, ಹೆರಿ ಫೆರ್ನಾಂಡೀಸ್ ನೀಡಿದ್ದಾರೆ. ಸಂಗೀತವನ್ನು ಖ್ಯಾತ ಸಂಗೀತ ನಿರ್ದೇಶಕ ಗುಣವಂತ್ ಸೇನ್ ನೀಡಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಎಲ್ಲವೂ ಈಗಾಗಲೇ ಜನಪ್ರಿಯವಾಗಿದೆ ಎಂದರು

ಗಣ್ಯರಿಂದ ಚಿತ್ರ ವೀಕ್ಷಣೆ: ಮೇ 12ರಂದು ಮಂಗಳೂರಿನ ಪ್ರಭಾತ್ ಸಿನಿಮಾ ಮಂದಿರದಲ್ಲಿ ಬೆಳಗ್ಗೆ 9 ಗಂಟೆಗೆ ಸೋಫಿಯಾದ ಮೊದಲ ಪ್ರದರ್ಶನದಲ್ಲಿ ಮಂಗಳೂರು ಕ್ರ್ತ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ, ಅನಿವಾಸಿ ಉದ್ಯಮಿ ರೊನಾಲ್ಡ್ ಕುಲಾಸೋ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಅವರ ಪತ್ನಿ ಬ್ಲೋಸಂ ಫೆರ್ನಾಂಡೀಸ್ ಸೇರಿದಂತೆ ನಾನಾ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಹೆರಿ ಫೆರ್ನಾಂಡೀಸ್, ಚಿತ್ರ ನಟ ಶೆಲ್ಟನ್ ಕ್ರಾಸ್ತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News