ಮಂಗಳೂರು : ಆಟೊ ಚಾಲಕನ ಕೊಲೆ ಪ್ರಕರಣ ; ಇಬ್ಬರಿಗೆ ಜೀವಾವಧಿ ಶಿಕ್ಷೆ , ಓರ್ವ ಖುಲಾಸೆ
ಮಂಗಳೂರು, ಮೇ 9: ಆಟೊ ಚಾಲಕನೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪರಾಧಿಗಳಿಗೆ ಜೀವಾವಧಿ ವಿಧಿಸಿ ಒಂದನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಕರಣದ ಮತ್ತೋರ್ವ ಆರೋಪಿಯನ್ನು ಸಾಕ್ಷಾಧಾರದ ಕೊರತೆಯಿಂದ ಖುಲಾಸೆಗೊಳಿಸಿದೆ.
ದೇರಳಕಟ್ಟೆ ಬಗಂಬಿಲದ ನಿವಾಸಿ ಉದಯ ಅಲಿಯಾಸ್ ಬಾಬು ಮತ್ತು ಪೆರ್ಮನ್ನೂರು ಪಂಡಿತ್ ಹೌಸ್ ನಿವಾಸಿ ಲ್ಯಾನ್ಸಿ ಡಿಸೋಜ ಯಾನೆ ಲ್ಯಾನ್ಸಿ ಎಂಬವರು ಜೀವಾವಧಿ ಶಿಕ್ಷೆಗೊಳಗಾದವರು. ಅಲ್ಲದೆ, ಇಬ್ಬರಿಗೂ ತಲಾ 20 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ, 6 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಅನುಭವಿಸುವಂತೆ ನ್ಯಾಯಾಧೀಶ ಸಿ.ಎಂ.ಜೋಷಿ ಆದೇಶ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
2014ರ ಆಗಸ್ಟ್ 15ರಂದು ತೊಕ್ಕೊಟ್ಟಿನ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಸಮೀಪದ ಸಂಗೀತ ಕಾರ್ಯಕ್ರಮವೊಂದು ಏರ್ಪಟ್ಟಿತ್ತು. ರೆಸ್ಟೋರೆಂಟ್‌ನಲ್ಲಿ ಊಟ ಮಾಡಲೆಂದು ಕೋಟೆಕಾರು ಸರಸ್ವತಿಕುಮೇರಿನ ನಿವಾಸಿ ಯತೀಶ್ ಕುಮಾರ್ (29) ತನ್ನ ಸ್ನೇಹಿತರೊಂದಿಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿ ಲ್ಯಾನ್ಸಿ ಎಂಬಾತನಿದ್ದ. ಕೈಲಾಸ್ ಬಾಬು ಎಂಬಾತ ಸಂಗೀತ ನುಡಿಯುತ್ತಿದ್ದಾಗ ಲ್ಯಾನ್ಸಿ ತಮಾಷೆ ಮಾಡಿದ್ದನೆಂದು ಆರೋಪಿಸಲಾಗಿತ್ತು. ಇದನ್ನು ಯತೀಶ್ ಪ್ರಶ್ನಿಸಿದ್ದೇ ಆತನ ಜೀವಕ್ಕೆ ಕುತ್ತು ತಂದಿತ್ತು.
ಜನರೆದು ತನ್ನನ್ನು ಪ್ರಶ್ನಿಸಿ ಅವಮಾನಿಸಿದ್ದಾನೆಂದು ಕುಪಿತನಾದ ಲ್ಯಾನ್ಸಿ ತನ್ನ ಸ್ನೇಹಿತರಾದ ಉದಯ ಮತ್ತು ವಿನಯ ಎಂಬವರನ್ನು ಸ್ಥಳಕ್ಕೆ ಬರುವಂತೆ ಹೇಳಿದ್ದ. ಸ್ಥಳಕ್ಕೆ ಆಗಮಿಸಿದವರೇ ಈ ತಂಡ ಯತೀಶ್‌ನನ್ನು ತಡೆದಿದ್ದು, ಪರಸ್ಪರ ಗಲಾಟೆ ನಡೆದಿತ್ತು. ಆಕ್ರೋಶಗೊಂಡ ಉದಯ ಯತೀಶ್‌ನನ್ನು ಚೂರಿಯಿಂದ ಇರಿದರೆ, ಲ್ಯಾನಿ, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಯತೀಶ್‌ನನ್ನು ಆಸ್ಪತ್ರೆಗೆ ತಕ್ಷಣ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.
ಈ ಬಗ್ಗೆ ಅಂದಿ ಉಳ್ಳಾಲ ಸಿಪಿಐಗಳಾದ ಧರ್ಮೇಂದ್ರ ಮತ್ತು ಸವಿತ್ರ ತೇಜ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಸೋಮವಾರ ವಾದ ವಿವಾದವನ್ನು ಆಲಿಸಿದ್ದ ನ್ಯಾಯಾಲಯವು ಇಬ್ಬರು ಅಪರಾಧಿಗಳೆಂದು ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ಮಂಗಳವಾರಕ್ಕೆ ಕಾಯ್ದಿರಿಸಿತ್ತು. ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.