ಬಿಜೆಪಿ ಪ್ರಚೋದನೆಯಿಂದ ಯುವಕರು ಜೈಲು ಪಾಲು: ಸಚಿವ ಪ್ರಮೋದ್
ಉಡುಪಿ, ಮೇ 9: ಬಿಜೆಪಿಯವರು ಬಜರಂಗದಳದಂತಹ ಹಿಂದೂ ಸಂಘಟನೆಗಳ ಮೂಲಕ ಯುವಕರನ್ನು ಪ್ರಚೋದಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯುವಕರನ್ನು ಒಗ್ಗೂಡಿಸಿ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜರಗಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಮತ್ತು ಕಾರ್ಯ ಕರ್ತರ ವಿಶೇಷ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಯುವ ಶಕ್ತಿಯನ್ನು ಒಗ್ಗೂಡಿಸುವ ಕಾರ್ಯ ಪಕ್ಷದಿಂದ ಆಗಬೇಕು. ಭಾರತದಲ್ಲಿ ಶೇ.65ರಷ್ಟಿರುವ ಯುವಕರನ್ನು ಪಕ್ಷದತ್ತ ಸೆಳೆಯಬೇಕಾಗಿದೆ. ಇಂದು ಭಾರತವು ಶಿಕ್ಷಣ, ಆರೋಗ್ಯ ಹಾಗೂ ಕ್ರೀಡೆಯಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಯುವಕರು ತಮ್ಮ ಗ್ರಾಮದ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 30,000 ಸದಸ್ಯತ್ವ ನೊಂದಾವಣೆ ಮಾಡಲಾಗಿದೆ. ಮೇ 15ರೊಳಗೆ 1ಲಕ್ಷ ಸದಸ್ಯತ್ವ ನೊಂದಣಿ ಮಾಡುವ ಗುರಿಯನ್ನು ಹೊಂದಲಾಗಿದೆ. ಯುವ ಕಾಂಗ್ರೆಸ್ ಘಟಕಕ್ಕೆ ಉಡುಪಿಯಲ್ಲಿ 2350 ಮಂದಿಯನ್ನು ನೊಂದಾವಣೆ ಯಾಗಿದ್ದು, ಮೇ 17ರಂದು ಯುವ ಕಾಂಗ್ರೆಸ್ ಚುನಾವಣೆ ನಡೆಯಲಿದೆ. ಶೇ.50ರಷ್ಟು ಸದಸ್ಯರ ನೊಂದಾವಣೆ ಆಗದಿದ್ದರೆ ಆ ಬ್ಲಾಕ್‌ನ ಯುವ ಕಾಂಗ್ರೆಸ್ ಅಸ್ತಿತ್ವಕ್ಕೆ ಬರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ನಗರಸಭೆ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಅಮೃತ್ ಶೆಣೈ, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಚಂದ್ರಿಕಾ ಶೆಟ್ಟಿ, ರೆಹಮಾನ್ ಮಣಿಪಾಲ, ಯತೀಶ್ ಕರ್ಕೇರ, ಜತಿನ್ ಉಪಸ್ಥಿತರಿದ್ದರು. ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.