ವಾಟ್ಸಾಪ್ ಮೂಲಕ ಬಯೋ ಎನ್‌ಜೈಮ್ ತಯಾರಿಕಾ ತರಬೇತಿ
ಉಡುಪಿ, ಮೇ 9: ಸಾವಯವ ಬದುಕು ವತಿಯಿಂದ ಸಾಮಾಜಿಕ ಜಾಲ ತಾಣವಾಗಿರುವ ವಾಟ್ಸಾಪ್ ಮೂಲಕ 10 ದಿನಗಳ ಮಾದರಿ ಬಯೋ ಎನ್ ಜೈಮ್ ತಯಾರಿಕಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತಾತ್ಕಾಲಿಕ ವಾಟ್ಸಾಪ್ ಗ್ರೂಪ್‌ನ್ನು ರಚಿಸಿ, ಅದರ ಮೂಲಕ ಬೆಂಗಳೂರಿನ ವಿಜಯಶಾಂತಿ ತರಬೇತಿಯನ್ನು ನಡೆಸಿಕೊಡಲಿದ್ದಾರೆ. ಶಿಬಿರಾರ್ಥಿಗಳಿಗೆ ಯಾವುದೇ ಸಂಶಯವಿದ್ದರೂ ವಾಟ್ಸಾಪ್ ಮೂಲಕವೇ ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಬಹುದು ಎಂದು ಸಾವಯವ ಬದುಕು ಸಂಚಾಲಕ ಕೆ.ಮಹೇಶ್ ಶೆಣೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪ್ರತಿನಿತ್ಯ ಬಳಸುವ ಟಾಯ್ಲೆಟ್ ಕ್ಲೀನರ್, ಫಿನಾಯಿಲ್, ಕ್ಲೀನಿಂಗ್ ಪೌಡರ್, ಬ್ಲೀಚಿಂಗ್ ಪೌಡರ್, ಹ್ಯಾಂಡ್‌ವಾಶ್‌ಗಳಲ್ಲಿ ಕೆಮಿಕಲ್ ಹಾಗೂ ಎಸಿಡ್ ಅಂಶ ಗಳಿದ್ದು, ಇವು ಪ್ರಕೃತಿ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದಕ್ಕೆ ಪರ್ಯಾಯವಾಗಿ ನಾವು ಬಳಸಿ ಬಿಸಾಡುವ ಹಣ್ಣುಗಳ ಸಿಪ್ಪೆಗಳನ್ನು ಸಂಸ್ಕರಿಸಿ ಬಳಸಬಹುದಾಗಿದೆ. ಇದನ್ನು ತಯಾರಿಸುವ ಬಯೋ ಎನ್‌ಜೈಮ್ ವಿಧಾನ ವನ್ನು ತರಬೇತಿ ಮೂಲಕ ಹೇಳಿಕೊಡಲಾಗುವುದು ಎಂದರು.
ಈ ತರಬೇತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ ಪಾಲ್ಗೊಳ್ಳಲು ಒಪ್ಪಿದ್ದಾರೆ. ಈ ಗ್ರೂಪ್‌ನಲ್ಲಿ 256 ಮಂದಿಗೆ ಪಾಲ್ಗೊಳ್ಳಲು ಅವಕಾಶವಿದ್ದು, ಆಸಕ್ತರು ಉಚಿತವಾಗಿ ತಮ್ಮ ಹೆಸರನ್ನು ನೊಂದಾವಣೆ ಮಾಡಿಕೊಳ್ಳಲು ಶ್ರೀಸಂಜೀವಿನಿ ಎಂಟರ್‌ಪ್ರೈಸಸ್, ಶೋಲ್ ಅಪಾರ್ಟ್‌ಮೆಂಟ್, ಸುದರ್ಶನ್ ರೆಸಿಡೆನ್ಸಿ ಬಳಿ, ಕಾಡಬೆಟ್ಟು ಉಡುಪಿ(ಮೊ-9880886898) ಇಲ್ಲಿಂದ ಅರ್ಜಿಯನ್ನು ಪಡೆಯಬಹುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಫೆಲಿಕ್ಸ್ ಆಳ್ವ, ಪ್ರಭಾಕರ ಭಟ್, ಡೆನಿಸ್ ಆಳ್ವ, ಅಗಸ್ಟಿನ್ ಮೆಂಡೋನ್ಸಾ ಉಪಸ್ಥಿತರಿದ್ದರು.