ವ್ಯಾಟಿಕನ್‌ನಿಂದ ‘ಬಿಗ್‌ಬ್ಯಾಂಗ್’ ಸಿದ್ಧಾಂತ ಆಚರಣೆ
ವ್ಯಾಟಿಕನ್ ಸಿಟಿ (ಇಟಲಿ), ಮೇ 9: ರೋಮನ್ ಕ್ಯಾಥೊಲಿಕ್ ಚರ್ಚ್ ವಿಜ್ಞಾನಕ್ಕೆ ವಿರೋಧಿಯಾಗಿದೆ ಎಂಬ ಭಾವನೆಯನ್ನು ಹೋಗಲಾಡಿಸಲು ಪೋಪ್‌ರ ಕಾರ್ಯಸ್ಥಾನ ವ್ಯಾಟಿಕನ್ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.
‘ಬೃಹತ್ ಸ್ಫೋಟ’ (ಬಿಗ್ ಬ್ಯಾಂಗ್)ದೊಂದಿಗೆ ವಿಶ್ವ ಆರಂಭಗೊಂಡಿತು ಎಂಬ ಸಿದ್ಧಾಂತದ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರಾದ ಮಾನ್‌ಸೈನರ್ ಜಾರ್ಜ್ ಲೆಮಾಯಿಟರ್ ಅವರ ಗೌರವಾರ್ಥ ಇಲ್ಲಿನ ವ್ಯಾಟಿಕನ್ ಅಬ್ಸರ್ವೇಟರಿಯಲ್ಲಿ ಮಂಗಳವಾರದಿಂದ ಶುಕ್ರವಾರದವರೆಗೆ ವಿವಿಧ ಉಪನ್ಯಾಸಗಳು ಏರ್ಪಾಡಾಗಿವೆ.
ಪೋಪ್ 13ನೆ ಲಿಯೊ 1891ರಲ್ಲಿ ಸ್ಥಾಪಿಸಿದ ವ್ಯಾಟಿಕನ್ ಅಬ್ಸರ್ವೇಟರಿಯಲ್ಲಿ ಕಪ್ಪು ಕುಳಿಗಳು, ಗುರುತ್ವಾಕರ್ಷ ಅಲೆಗಳು ಮತ್ತು ಸ್ಪೇಸ್-ಟೈಮ್ ಸಿಂಗ್ಯುಲಾರಿಟೀಸ್ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ನೀಡಲು ಪ್ರಮುಖ ವಿಜ್ಞಾನಿಗಳು ಮತ್ತು ಖಗೋಳ ವಿಜ್ಞಾನಿಗಳಿಗೆ ಅಹ್ವಾನಗಳನ್ನು ನೀಡಲಾಗಿದೆ.
ಗೆಲಿಲಿಯೊ ಧರ್ಮ ವಿರೋಧಿ ಕೆಲಸ ಮಾಡಿದ್ದಾರೆ ಎಂಬ ಆರೋಪದಲ್ಲಿ 400 ವರ್ಷಗಳ ಹಿಂದೆ ಅವರ ವಿರುದ್ಧ ವಿಚಾರಣೆ ನಡೆದ ಬಳಿಕ, ಚರ್ಚ್ ವಿಜ್ಞಾನಕ್ಕೆ ವಿರೋಧಿಯಾಗಿದೆ ಎಂಬ ಭಾವನೆ ಪ್ರಚಲಿತವಾಗಿದೆ.