ಪಾಕ್, ಅಫ್ಘಾನ್ ಗಡಿ ವಿವಾದ ಇತ್ಯರ್ಥಕ್ಕೆ ಗೂಗಲ್ ಮ್ಯಾಪ್ ಬಳಕೆ

Update: 2017-05-09 16:31 GMT

ಕಾಬೂಲ್, ಮೇ 9: ಗೂಗಲ್ ಮ್ಯಾಪ್ಸ್ ಬಳಸಿ ತಮ್ಮ ನಡುವಿನ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ನಿರ್ಧರಿಸಿವೆ ಎಂದು ಉಭಯ ದೇಶಗಳ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಗಡಿ ವಿವಾದವು ಕಳೆದ ವಾರ ಉಭಯ ಬಣಗಳ ನಡುವೆ ಭೀಕರ ಸಂಘರ್ಷಕ್ಕೆ ಕಾರಣವಾಗಿತ್ತು.

ಸೈನಿಕರ ಬೆಂಗಾವಲಿನೊಂದಿಗೆ ಪಾಕಿಸ್ತಾನದ ಜನಗಣತಿ ತಂಡವು ಶುಕ್ರವಾರ ದಕ್ಷಿಣದ ಗಡಿಯುದ್ದಕ್ಕೂ ಇರುವ ವಿವಾದಾಸ್ಪದ ಗ್ರಾಮಗಳಿಗೆ ಭೇಟಿ ನೀಡಿದಾಗ ಸಂಭವಿಸಿದ ಘರ್ಷಣೆಯಲ್ಲಿ ಉಭಯ ಕಡೆಗಳ ಕನಿಷ್ಠ ಎಂಟು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

1947ರಲ್ಲಿ ಪಾಕಿಸ್ತಾನಕ್ಕೆ ಬ್ರಿಟಿಶರಿಂದ ಸ್ವಾತಂತ್ರ ದೊರೆತಾಗ ಅದು ಅಫ್ಘಾನಿಸ್ತಾನದೊಂದಿಗೆ 2,400 ಕಿಲೋಮೀಟರ್ ಗಡಿಯನ್ನೂ ಹಂಚಿಕೊಂಡಿತು. ಆದರೆ, ಇದನ್ನು ಅಫ್ಘಾನಿಸ್ತಾನ ಔಪಚಾರಿಕವಾಗಿ ಒಪ್ಪಿಕೊಂಡಿಲ್ಲ.

ಅಫ್ಘಾನಿಸ್ತಾನದ ಅಧಿಕೃತ ನಕ್ಷೆಗಳು ‘ಡುರಾಂಡ್ ಲೈನ್’ನ್ನು ಗಡಿ ಎಂದು ಮಾನ್ಯ ಮಾಡಿದರೆ, ಹೆಚ್ಚಿನ ‘ರಾಷ್ಟ್ರೀಯವಾದಿ’ಗಳು ಪಾಕಿಸ್ತಾನದ ಮೂಲಕ ಹರಿಯುತ್ತಿರುವ ಸಿಂಧೂ ನದಿಯವರೆಗೆ ಅಫ್ಘಾನಿಸ್ತಾನದ ಗಡಿ ಇದೆ ಎಂದು ಹೇಳುತ್ತಾರೆ.

‘‘ಎರಡು ದೇಶಗಳ ಭೌಗೋಳಿಕ ಸರ್ವೆ ಇಲಾಖೆಗಳ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುತ್ತಾರೆ ಹಾಗೂ ಅವರು ಈ ಸಂದರ್ಭದಲ್ಲಿ ಗೂಗಲ್ ಮ್ಯಾಪ್ಸ್‌ನ್ನು ಬಳಸುತ್ತಾರೆ’’ ಎಂದು ಇಸ್ಲಾಮಾಬಾದ್‌ನಲ್ಲಿರುವ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News