ಸಿಐಡಿಯಿಂದ ಖುರೇಷಿ ವಿಚಾರಣೆ
ಮಂಗಳೂರು, ಮೇ 9: ಕೊಲೆಯತ್ನ ಪ್ರಕರಣದ ಆರೋಪಿ ಅಹ್ಮದ್ ಖುರೇಷಿ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರಿಗೆ ಬಂದಿರುವ ಸಿಐಡಿ ತಂಡ ನಗರದ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಖುರೇಶಿಯನ್ನು ವಿಚಾರಣೆ ನಡೆಸಿದೆ. ಬೆಳಗ್ಗೆ 11.45ರಿಂದ 1.45ರವರೆಗೆ ವಿಚಾರಣೆ ನಡೆಸಿದೆ.
ಅಹ್ಮದ್ ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಎ.17ರಂದು ಸಿಐಡಿಗೆ ನೀಡಿದ್ದ ಹಿನ್ನೆಲೆಯಲ್ಲಿ ಎ. 21ರಂದು ಸಿಐಡಿ ಅಧಿಕಾರಿಗಳ ತಂಡ ಮಂಗಳೂರಿಗೆ ಭೇಟಿ ನೀಡಿ ಖುರೇಶಿ, ಆತನ ಸಹೋದರ ನಿಶಾದ್, ಆಸ್ಪತ್ರೆ ಸೇರಿದಂತೆ ವಿವಿಧೆಡೆ ವಿಚಾರಣೆ ನಡೆಸಿ ಬಳಿಕ ಬೆಂಗಳೂರಿಗೆ ತೆರಳಿತ್ತು.
ಮಂಗಳವಾರ ಮತ್ತೆ ಮಂಗಳೂರಿಗೆ ಬಂದ ಸಿಐಡಿ ಅಧಿಕಾರಿ ಮಲ್ಲೇಶ್ ನೇತೃತ್ವದ ತಂಡ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಖುರೇಷಿಯ ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಿದೆ. ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ವೈದ್ಯರು ಸೂಚಿಸಿದ್ದ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಜೈಲಿಗೆ ಕರೆದೊಯ್ಯಲಾಯಿತು. ವೈದ್ಯಕೀಯ ಅಧಿಕಾರಿಗಳು ಖುರೇಷಿಯ ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದು, ಎರಡನೇ ಹಂತದ ವರದಿ ಬರಬೇಕಿದೆ.
ಬಿಡುಗಡೆ ಸಾಧ್ಯತೆ: ನ್ಯಾಯಾಲಯವು ಈಗಾಗಲೇ ಖುರೇಷಿಗೆ ಷರತುತಿ ಬದ್ಧ ಜಾಮೀನು ಬಿಡುಗಡೆಗೆ ಆದೇಶ ನೀಡಿದ್ದು, ಮಂಗಳವಾರ ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆ ನಡೆದಿದೆ. ಅಲ್ಲದೆ, ಜೈಲು ಅಧಿಕಾರಿಗಳಿಗೆ ಆತನನ್ನು ಬಿಡುಗಡೆಗೊಳಿಸಲು ಆದೇಶ ನೀಡಿದೆ. ಮೇ 10ರಂದು ಖುರೇಶಿ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.