ಮಹಿಳೆಯ ಮಾನಭಂಗಕ್ಕೆ ಯತ್ನ : ಆರೋಪಿಯ ಬಂಧನ
ಪುತ್ತೂರು,ಮೇ9 : ಪಾಸ್ಟ್‌ಪುಡ್ ಅಂಗಡಿಯೊಳಗಿದ್ದ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಘಟನೆ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಆರೋಪಿಯನ್ನು ಸೋಮವಾರ ಬಂಧಿಸಿರುವುದಾಗಿ ತಿಳಿದು ಬಂದಿದೆ. ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನರಿಮೊಗ್ರು ಗ್ರಾಮದ ನಡುಗುಡ್ಡೆ ನಿವಾಸಿ ಶೇಸಪ್ಪ ಪುರುಷ ಎಂಬವರು ಪಾಸ್ಟ್‌ಫುಡ್ ಅಂಗಡಿ ವ್ಯವಹಾರ ನಡೆಸುತ್ತಿದ್ದು, ಅವರ ಪತ್ನಿ ಭವಾನಿ ಎಂಬವರು ಅಂಗಡಿಯೊಳಗಿದ್ದ ವೇಳೆ ಅಲ್ಲಿಗೆ ಬಂದ ಮುಂಡೂರು ಗ್ರಾಮದ ಒತ್ತೆಮುಂಡೂರು ನಿವಾಸಿ ಗಂಗಾಧರ ಪೂಜಾರಿ ಅವರ ಪುತ್ರ ಪ್ರಶಾಂತ್ ಕುಮಾರ್ (27) ಎಂಬಾತ ಅವರ ಮೈಮೇಲೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರು ಆರೋಪಿಯನ್ನು ಪುತ್ತೂರಿನ ದರ್ಬೆಯಲ್ಲಿ ಬಂಧಿಸಿರುವುದಾಗಿ ತಿಳಿದುಬಂದಿದೆ.