ಪುತ್ತೂರು : ಮಗುವಿನೊಂದಿಗೆ ತಾಯಿ ನಾಪತ್ತೆ
ಪುತ್ತೂರು,ಮೇ9 : ತವರು ಮನೆಯಲ್ಲಿ ವಾಸ್ತವ್ಯ ಹೊಂದಿದ್ದ ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಪ್ರಾಯದ ಮಗುವಿನ ಸಮೇತ ನಾಪತ್ತೆಯಾದ ಘಟನೆಯೊಂದು ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಮುಕ್ವೆ ಎಂಬಲ್ಲಿ ನಡೆದಿದ್ದು, ಘಟನೆಯ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ನರಿಮೊಗ್ರು ಗ್ರಾಮದ ಮುಕ್ವೆ ನಿವಾಸಿ ಹಸೈನಾರ್ ಅವರ ಪುತ್ರಿ ಫೌಝಿಯಾ ಯಾನೆ ನಸೀಮಾ (24) ಮತ್ತು ಅವರ ಎರಡೂವರೆ ವರ್ಷ ಪ್ರಾಯದ ಪುತ್ರ ಮಹಮ್ಮದ್ ಮುಸ್ತಾಫ ನಾಪತ್ತೆಯಾದವರು.
ಫೌಝಿಯಾ ಅವರ ಪತಿ ಜಾಕೀರ್ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಈ ಹಿನ್ನಲೆಯಲ್ಲಿ ಕೆಲ ಸಮಯದಿಂದೀಚೆಗೆ ಫೌಝಿಯಾ ಅವರು ತನ್ನ ಮಗುವಿನೊಂದಿಗೆ ಮುಕ್ವೆಯಲ್ಲಿರುವ ತವರು ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಕಳೆದ ಗುರುವಾರ ಪುತ್ತೂರು ಪೇಟೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ತನ್ನ ಮಗುವಿನೊಂದಿಗೆ ಪೇಟೆಗೆ ತೆರಳಿದ ಫೌಝಿಯಾ ಅವರು ಹಿಂತಿರುಗಿ ಮನೆಗೆ ಬಂದಿರಲಿಲ್ಲ. ಈ ಕುರಿತು ಅವರಿಗಾಗಿ ಹುಡುಕಾಡಿದ ಮನೆಮಂದಿ ಅವರು ಪತ್ತೆಯಾಗದ ಹಿನ್ನಲೆಯಲ್ಲಿ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಫೌಜಿಯಾ ಅವರ ತಂದೆ ಹಸೈನಾರ್ ಅವರು ನೀಡಿರುವ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.