ತಾಲೂಕು ದಲಿತ್ ಸೇವಾ ಸಮಿತಿ ವಿಸರ್ಜನೆ- ಗಿರಿಧರ ನಾಯ್ಕ್
ಪುತ್ತೂರು, ಮೇ 10: ದಲಿತ್ ಸೇವಾ ಸಮಿತಿಯ ಪುತ್ತೂರು ಶಾಖೆಯನ್ನು ಸಮಾನ ಮನಸ್ಕರ ಸಭೆಯಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ರಾಜೀನಾಮೆ ನೀಡುವುದರ ಮೂಲಕ ವಿಸರ್ಜಿಲಾಗಿದ್ದು, ಅಂಬೇಡ್ಕರ್ ತತ್ವ, ರಕ್ಷಣಾ ವೇದಿಕೆ-ಕರ್ನಾಟಕ ಎಂಬ ಹೊಸ ಸಂಘಟನೆಯನ್ನು ಮಾಡುವುದಾಗಿ ತೀರ್ಮಾನಿಸಲಾಗಿದೆ ಎಂದು ಗಿರಿಧರ್ ನಾಯ್ಕ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಧ್ಯಕ್ಷರು ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಯಾವ ವಿಚಾರಕ್ಕೂ ಜಿಲ್ಲಾಧ್ಯಕ್ಷರಲ್ಲಿ ಕೇಳಿಯೇ ನಾವು ಕಾರ್ಯನಿರ್ವಹಿಸಬೇಕು. ಇದು ಪುತ್ತೂರು ಶಾಖೆಯ ಎಲ್ಲಾ ಪದಾಧಿಕಾರಿಗಳಿಗೆ, ಸದಸ್ಯರಿಗೆ ತೊಂದರೆಯಾಗಿದೆ. ದಲಿತ ವರ್ಗದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಎಲ್ಲಾ ವರ್ಗದ ಧ್ವನಿಯಾಗಿದ್ದರು. ಸಮಸ್ಯೆಯಲ್ಲಿ ಸಿಲುಕಿರುವ ಎಲ್ಲಾ ವರ್ಗದ ಬಡ ಜನರ ಪರವಾಗಿ ನಾವು ಹೋರಾಟ ಮಾಡುವ ಮೂಲಕ ಸಹಾಯ ಮಾಡುತ್ತಿದ್ದೆವು. ಇದರಿಂದ 13 ಸದಸ್ಯತ್ವ ಇದ್ದ ದಲಿತ್ ಸೇವಾ ಸಮಿತಿ ಪುತ್ತೂರು ಶಾಖೆಯಲ್ಲಿ 1,400ಕ್ಕೂ ಮಿಕ್ಕಿ ಸದಸ್ಯತ್ವ ಹೆಚ್ಚಾಗಿತ್ತು. ಈ ನನ್ನ ಉತ್ತಮ ಕಾರ್ಯ ಜಿಲ್ಲಾಧ್ಯಕ್ಷರಿಗೆ ಸಹಿಸಲು ಸಾಧ್ಯವಾಗದ ಕಾರಣ ನಮಗೆ ತೊಂದರೆ ನೀಡಲಾರಂಬಿಸಿದ ಕಾರಣ ಸಮಿತಿಯನ್ನು ವಿಸರ್ಜನೆ ಮಾಡಿರುವುದಾಗಿ ತಿಳಿಸಿದರು.
ಸಮಾನ ಮನಸ್ಕ ಸದಸ್ಯರೆಲ್ಲಾ ಸಭೆ ನಡೆಸಿದ್ದು, ಅಂಬೇಡ್ಕರ್ ಸಿದ್ಧಾಂತವನ್ನು ಪ್ರತಿಪಾದಿಸುವ ಸಂಘಟನೆಯನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಜೂ.4 ರಂದು ರಾಜ್ಯ ಮಟ್ಟದ ಹೊಸ ಸಂಘಟನೆಯನ್ನು ಘೋಷಿಸಲಾಗುವುದು. ಸರಕಾರದ ಸವಲತ್ತುಗಳನ್ನು ತಳಮಟ್ಟದ ಬಡ ದಲಿತ ಕುಟುಂಬಕ್ಕೆ ತಲುಪಿಸಲು ಪ್ರಯತ್ನಿಸುವುದು ಮಾತ್ರವಲ್ಲದೆ ದಲಿತರಲ್ಲದ ಎಲ್ಲಾ ವರ್ಗದ ಬಡ ಕುಟುಂಬಕ್ಕೂ ಸರಕಾರಿ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಹೋರಾಟ ಮಾಡುವುದು ನಮ್ಮ ಸಂಘಟನೆಯ ಮೂಲ ಉದ್ದೇಶವಾಗಿದೆ. ರಾಜ್ಯಾದ್ಯಂತ ಈ ಸಂಘಟನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಾಲಚಂದ್ರ ಸೊರಕೆ, ಉಮೇಶ್ ಬಿ, ಉಮೇಶ್ ತ್ಯಾಗರಾಜ ನಗರ, ಮಮತಾ ಆರ್. ಎಸ್ ಉಪಸ್ಥಿತರಿದ್ದರು.