×
Ad

ಮೇ18: ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಬೆಳ್ಳಿ ಹಬ್ಬ

Update: 2017-05-10 18:29 IST

ಪುತ್ತೂರು, ಮೇ 10: ದ.ಕ. ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರವರ್ತನೆಯಲ್ಲಿ ಕಾರ್ಯಾಚರಿಸುತ್ತಿರುವ ನಗರದ ತೆಂಕಿಲದಲ್ಲಿನ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಬೆಳ್ಳಿಹಬ್ಬ ಸಮಾರಂಭ ಮೇ18ರಂದು ನಡೆಯಲಿದೆ. ಈ ಸಂದರ್ಭ ಬೆಳ್ಳಿಹಬ್ಬದ ಸವಿನೆನಪಿಗಾಗಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಎಚ್. ಅಚ್ಚುತ್ ನಾಯಕ್ ತಿಳಿಸಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನೂತನ ಕಟ್ಟಡವನ್ನು ಕೆಂದ್ರ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ದೇಕರ್ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕುಟುಂಬ ಪ್ರಭೋದನದ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪಾಲ್ಗೊಳ್ಳಲಿದ್ದಾರೆ. ಗ್ರಾಂಥಾಲಯದ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್, ಗಣಕಯಂತ್ರ ಕೊಠಡಿ ಉದ್ಘಾಟನೆಯನ್ನು ಕೆಂದ್ರ ಹಣಕಾಸು ಇಲಾಖೆಯ ಸಹಾಯಕ ಸಚಿವ ಅರ್ಜುನ್‌ರಾಮ್ ಮೇಫ್ವಾಲ್ ನೆರವೇರಿಸಲಿದ್ದಾರೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಅಂದು ಸಂಜೆ 3ಕ್ಕೆ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ನೂತನ ಕಟ್ಟಡದಲ್ಲಿ ಸುಸಜ್ಜಿತ ಗ್ರಂಥಾಲಯವನ್ನು ತೆರೆಯಲಾಗುವುದು. ಈ ಸಂದರ್ಭ ಗ್ರಂಥಾಲಯಕ್ಕೆ ಪುಸ್ತಕ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗ್ರಂಥಾಲಯದ ಬಳಿ 4 ಪುಸ್ತಕ ಮಳಿಗೆಗಳನ್ನು ತೆರೆಯಲಾಗುವುದು. ಶಿಕ್ಷಣ ಪ್ರೇಮಿಗಳು ಇಲ್ಲಿಂದ ಪುಸ್ತಕ ಖರೀದಿಸಿ ಗ್ರಂಥಾಲಯಕ್ಕೆ ಸಮರ್ಪಿಸಲು ಅವಕಾಶವಿದೆ. ಶಾಲಾ ಕಟ್ಟಡವು 3 ಹಂತಗಳನ್ನು ಹೊಂದಿದ್ದು 25 ತರಗತಿ ಕೊಠಡಿಗಳಿವೆ. ಇಲ್ಲಿ ಸುಸಜ್ಜಿತ ಪ್ರಯೋಗಾಲಯ, ವಿಜ್ಞಾನ ಆವಿಷ್ಕಾರಗಳ ಅನ್ವೇಷಣಾ ಕೊಠಡಿ, ಆಪ್ತ ಸಲಹಾ ಕೇಂದ್ರ, ಗ್ರಂಥಾಲಯವಿದೆ. ಈ ಕಟ್ಟಡ 50 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ.


ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಸಮಾರಂಭದ ಆಮಂತ್ರಣ ವಿತರಣಾ ಕಾರ್ಯಕ್ರಮ ಮೇ11ರಂದು ನಡೆಯಲಿದೆ. ಬೆಳಗ್ಗೆ ನಗರದ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದಿಂದ ಮೆರವಣಿಗೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಆಮಂತ್ರಣ ವಿತರಣೆ ಮಾಡಲಾಗುವುದು. ಮೇ 18ರ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಶಾಲಾ ಸಂಚಾಲಕ ವಿನೋದ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News