ಪಶು ವೈದ್ಯಕೀಯ ಸಂಘದ ಬೇಡಿಕೆ ಈಡೇರದಿದ್ದರೆ ಮೇ 15 ರಿಂದ ಅನಿರ್ದಿಷ್ಟಾವಧಿ ಮುಷ್ಕರ
ಬೆಳ್ತಂಗಡಿ, ಮೇ 10: ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಪರೀಕ್ಷಕರ ಸಂಘದಿಂದ ವೃಂದ ಹಾಗು ನೇಮಕಾತಿ ನಿಯಮಗಳಿಗೆ ಅಂತಿಮ ಅಧಿಸೂಚನೆ ಜಾರಿ ಮಾಡಲು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮೇ 15ರ ಒಳಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಂತಿಮ ಅಧಿಸೂಚನೆ ಆಗದಿದ್ದರೆ ಪಶು ವೈದ್ಯಕೀಯದ ಎಲ್ಲಾ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿ, ಅನಿರ್ಧಿಷ್ಟಾವಧಿ ಮುಷ್ಕರ ಮಾಡಲು ಸಂಘ ತೀರ್ಮಾನಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಕೆ. ಜಯಕೀರ್ತಿ ಜೈನ್ ತಿಳಿಸಿದ್ದಾರೆ.
ಇದರ ಬಗ್ಗೆ ಎ. 1ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಎ. 7 ರ ಒಳಗೆ ಆರಂಭವಾಗುವ ಸಾಮೂಹಿಕ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ತಿಳಿಸಿದ್ದರೂ ಅಂತಿಮ ಅಧಿಸೂಚನೆ ಆಗಲಿಲ್ಲ. ಇಲಾಖಾ ಸಚಿವರಲ್ಲಿ ಅರಕೂಲಗೂಡಿನಲ್ಲಿ ಸಂಘದ ಪದಾಧಿಕಾರಿಗಳು ಚರ್ಚಿಸಿದ್ದರು. 2-3 ದಿನಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಭರವಸೆ ನೀಡಿದ್ದರು. ಎಲ್ಲರೂ ಕಾಲಬಾಯಿ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಶ್ರಮಿಸಲಾಗಿದೆ. ಆದರೆ 21 ದಿನ ಕಳೆದರೂ ಸಚಿವರ ಭರವಸೆ ಮಾತ್ರ ನೆನೆಗುದಿಗೆ ಬಿದ್ದಿದೆ ಎಂದರು.
ಸಂಘವು ಮೇ 15ರ ವರೆಗೆ ಅಂತಿಮ ಅಧಿಸೂಚನೆಗಾಗಿ ಕಾದು ನೋಡಲು ತೀರ್ಮಾನಿಸಿದೆ. ಮೇ 14ರ ಒಳಗಾಗಿ ಆದೇಶ ಹೊರಡಿಸದಿದ್ದರೆ ರಾಜ್ಯಾದ್ಯಂತ ಪಶು ವೈದ್ಯಕೀಯ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿ, ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಮುಚ್ಚಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಕಪ್ಪು ಪಟ್ಟಿ ಧರಿಸಿ, ಅನಿರ್ಧಿಷ್ಟ ಕಾಲ ಮುಷ್ಕರ ಸಂಘವು ನಿರ್ಧರಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.