×
Ad

ಆಚಾರ್ಯ ಮಧ್ವರು ಜಗತ್ತಿನ ಗುರುಗಳು: ಅದಮಾರುಶ್ರೀ

Update: 2017-05-10 20:03 IST

ಕುಂಜಾರುಗಿರಿ(ಉಡುಪಿ), ಮೇ10: ಆಚಾರ್ಯ ಮಧ್ವರು ಜಗತ್ತಿನ ಗುರುಗಳು. ಪಾಜಕದಲ್ಲಿ ಕುಳಿತಿರುವ ಮಧ್ವರು ಕುಂಜಾರುಗಿರಿಯಲ್ಲಿ ಎದ್ದು ಕಮಲದ ಮೇಲೆ ನಿಂತಿರುವ ಸಂಕೇತವೇ ನಮ್ಮಲ್ಲಿರುವ ಕರ್ತವ್ಯ ಪ್ರಜ್ಞೆಯ ಜಾಗೃತಿಗಾಗಿ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಬುಧವಾರ ಶ್ರೀಕ್ಷೇತ್ರ ಕುಂಜಾರುಗಿರಿಯ ತಪ್ಪಲಲ್ಲಿ ಪಲಿಮಾರು ಮಠದ ಯತಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ 32 ಅಡಿ ಎತ್ತರದ ಶ್ರೀಮಧ್ವಾಚಾರ್ಯರ ಏಕಶಿಲಾ ವಿಗ್ರಹದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಿದ್ದರು.

ಶ್ರೀಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಶ್ರೀಪಾದರು ಮಾತನಾಡಿ, ಮಹಾಜ್ಞಾನಿಗಳು ಮನಸ್ಸಿನಲ್ಲಿ ಯೋಚಿಸಿದ್ದನ್ನು ಕಾರ್ಯದಲ್ಲಿ ಮಾಡಿ ತೋರಿಸುತ್ತಾರೆ. ಜೈನ ಸಂಪ್ರದಾಯದಲ್ಲಿ ಗೋಮಟೇಶ್ವರನಿಗೆ ಮಹಾ ಮಜ್ಜನ ನಡೆದಂತೆ ಇಂದು ಗೋಮತ ಈಶ್ವರನಿಗೆ (ಆಚಾರ್ಯ ಮಧ್ವ) ಮಹಾ ಮಜ್ಜನ ನಡೆದಿದೆ ಎಂದರು.

ಅಧ್ಯಕ್ಷತೆ ವಹಿಸಿಆಶೀರ್ವಚನ ನೀಡಿದ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮಾತನಾಡಿ, ಸರ್ವಗುಣ ಸಂಪನ್ನರೂ, ತತ್ವಜ್ಞಾನಿಗಳೂ ಆದ ಆಚಾರ್ಯ ಮಧ್ವರು ಎತ್ತರದ ಸ್ಥಾನದಲ್ಲಿ ನಿಂತು ಸರ್ವರನ್ನೂ ಅನುಗ್ರಹಿಸುವಂತೆ ಈ ವಿಗ್ರಹವನ್ನು ಎತ್ತರದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದರು.

ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಉತ್ತರಾಧಿಮಠದ ಶ್ರೀಸತ್ಯಾರ್ಥತೀರ್ಥ ಶ್ರೀಪಾದರು, ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ವಿದ್ವಾಂಸರಾದ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ, ಮುಂಬಯಿಯ ವಿದ್ವಾಂಸ ವಿದ್ಯಾಸಿನ್ಹಾ ಆಚಾರ್ ಮಬುಲಿ ಧಾರ್ಮಿಕ ಪ್ರವಚನ ನೀಡಿದರು. ಸಮಾರಂಭದುದ್ದಕ್ಕೂ ದುಡಿದ ಅನೇಕರನ್ನು ಗೌರವಿಸಲಾಯಿತು. ವಂಶಿ ಕೃಷ್ಣಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News