ಹುತಾತ್ಮ ಯೋಧನ ಕುಟುಂಬಕ್ಕೆ ಬಿಹಾರ ಸರಕಾರ ನೀಡಿದ್ದ ಚೆಕ್ ಬೌನ್ಸ್

Update: 2017-05-10 14:42 GMT

 ಹೊಸದಿಲ್ಲಿ, ಮೇ 10: ಸುಕ್ಮಾದಲ್ಲಿ ನಕ್ಸಲರ ದಾಳಿಗೆ ಬಲಿಯಾದ ಸಿಆರ್‌ಪಿಎಫ್ ಯೋಧ ರಂಜೀತ್ ಕುಮಾರ್ ಕುಟುಂಬಕ್ಕೆ ಬಿಹಾರ ಸರಕಾರ ನೀಡಿದ್ದ 5 ಲಕ್ಷ ರೂ. ಮೊತ್ತದ ಪರಿಹಾರ ಧನದ ಚೆಕ್ ಬೌನ್ಸ್ (ಅಮಾನ್ಯ) ಆಗಿದ್ದು ಇದು ಸರಕಾರದ ಅಸಡ್ಡೆಯ ವರ್ತನೆಗೊಂದು ಸಾಕ್ಷಿ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಶೇಖ್‌ಪುರ ಜಿಲ್ಲೆಯ ಬ್ಯಾಂಕೊಂದರಲ್ಲಿ ಚೆಕ್ ಠೇವಣಿ ಇಡಲು ಹುತಾತ್ಮ ಯೋಧರ ಕುಟುಂಬದವರು ನಾಲ್ಕೈದು ಬಾರಿ ಅಲೆದಾಡಿದ ನಂತರ, ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಅಮಾನ್ಯಗೊಳಿಸುವುದಾಗಿ ಬ್ಯಾಂಕ್‌ನವರು ತಿಳಿಸಿದ್ದಾರೆ. ಹುತಾತ್ಮ ರಂಜಿತ್ ಕುಮಾರ್ ಶೇಖ್‌ಪುರ ಜಿಲ್ಲೆಯ ಫೂಲ್‌ಚೋಡ ಗ್ರಾಮದ ನಿವಾಸಿಯಾಗಿದ್ದು ವೃದ್ಧ ತಂದೆ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

  ಈ ಘಟನೆ ಹುತಾತ್ಮ ಯೋಧರಿಗೆ ಮಾಡಿರುವ ಅವಮಾನ ಎಂಬ ಟೀಕೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಒಂದಿಷ್ಟೂ ಕನಿಕರವಿಲ್ಲ. ಹುತಾತ್ಮ ಯೋಧರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವ ವ್ಯವಧಾನವೂ ಅವರಿಗಿಲ್ಲ ಎಂದು ಬಿಜೆಪಿ ಟೀಕಿಸಿದೆ.

  ಸುಕ್ಮಾ ಪ್ರಕರಣದಲ್ಲಿ ಹುತಾತ್ಮರಾದ ಬಿಹಾರದ ಐವರು ಯೋಧರ ಮೃತದೇಹವನ್ನು ಬಿಹಾರ ವಿಮಾನನಿಲ್ದಾಣಕ್ಕೆ ತಂದಾಗ ಅಂತಿಮ ಗೌರವ ಅರ್ಪಿಸಲು ನಿತೀಶ್ ತೆರಳಿರಲಿಲ್ಲ. ಈ ಸಂದರ್ಭ ಅವರು ಸಿನೆಮಾ ನೋಡುವುದರಲ್ಲಿ ತಲ್ಲೀನರಾಗಿದ್ದರು ಎಂಬ ಟೀಕೆ ವ್ಯಕ್ತವಾಗಿತ್ತು. ಅಲ್ಲದೆ ನಿತೀಶ್ ಸರಕಾರದ ಯಾವ ಸಚಿವರೂ ಕೂಡಾ ವಿಮಾನ ನಿಲ್ದಾಣಕ್ಕೆ ತೆರಳಿ ಗೌರವ ಸಲ್ಲಿಸಿರಲಿಲ್ಲ. ಆ ಬಳಿಕ ಸಂತಾಪ ಸೂಚಿಸಿದ್ದ ನಿತೀಶ್ ಕುಮಾರ್, ಹುತಾತ್ಮ ಯೋಧರ ಸಂಬಂಧಿಕರಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಆದರೆ ಈಗ ಈ ಚೆಕ್ ಅಮಾನ್ಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News