ದಕ್ಷಿಣ ಕೊರಿಯ: ಮೂನ್ ಜೇ-ಇನ್ ನೂತನ ಅಧ್ಯಕ್ಷ

Update: 2017-05-10 14:43 GMT

ಸಿಯೋಲ್ (ದಕ್ಷಿಣ ಕೊರಿಯ), ಮೇ 10: ದಕ್ಷಿಣ ಕೊರಿಯದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಎಡಪಂಥೀಯ ಧೋರಣೆಯ ಮಾಜಿ ಮಾನವಹಕ್ಕುಗಳ ವಕೀಲ ಮೂನ್ ಜೇ-ಇನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಅವರು ಅಧ್ಯಕ್ಷರಾಗಿ ಅಧಿಕಾರವನ್ನೂ ವಹಿಸಿಕೊಂಡರು.

ಭ್ರಷ್ಟಾಚಾರದ ಆರೋಪದಲ್ಲಿ ಮಾಜಿ ಅಧ್ಯಕ್ಷೆ ಪಾರ್ಕ್ ಗಿಯೂನ್ ಹೈ ಪದಚ್ಯುತಗೊಂಡ ಬಳಿಕ ಹಾಗೂ ದೋಷಾರೋಪಣೆಗೊಳಗಾದ ಬಳಿಕ ದೇಶದಲ್ಲಿ ಚುನಾವಣೆಯನ್ನು ನಡೆಸಲಾಗಿತ್ತು.

ವ್ಯಾಪಕ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದಿಂದ ಆಕ್ರೋಶಗೊಂಡಿದ್ದ ಜನರು ಬದಲಾವಣೆಗಾಗಿ ಮತಗಳನ್ನು ಹಾಕಿದ್ದಾರೆ. ದೇಶದಲ್ಲಿ ಉದ್ಯೋಗಾವಕಾಶಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಹಾಗೂ ಬೆಳವಣಿಗೆ ಕುಂಠಿತಗೊಂಡಿರುವುದರ ಬಗ್ಗೆಯೂ ಜನರು ಅಸಮಾಧಾನಗೊಂಡಿದ್ದರು.

ಡೆಮಾಕ್ರಟಿಕ್ ಪಾರ್ಟಿಯ ಮೂನ್ 41.1 ಶೇಕಡ ಮತಗಳನ್ನು ಪಡೆದಿದ್ದಾರೆ ಎಂಬುದಾಗಿ ರಾಷ್ಟ್ರೀಯ ಚುನಾವಣಾ ಆಯೋಗ (ಎನ್‌ಇಸಿ) ಪ್ರಕಟಿಸಿದೆ.

ಎರಡನೆ ಸ್ಥಾನದಲ್ಲಿರುವ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಹಾಂಗ್ ಜೂನ್ ಪ್ಯೊ 24.03 ಶೇ. ಮತಗಳನ್ನು ಪಡೆದರೆ, ತಟಸ್ಥ ನಿಲುವಿನ ಅಹನ್ ಚಿಯೊಲ್ ಸೂ 21.4 ಶೇ. ಮತಗಳೊಂದಿಗೆ ಮೂರನೆ ಸ್ಥಾನದಲ್ಲಿದ್ದಾರೆ.

ಉತ್ತರ ಕೊರಿಯ ಭೇಟಿಗೆ ಸಿದ್ಧ

ಪರಮಾಣು ಅಸ್ತ್ರಗಳನ್ನು ಹೊರುವ ಕ್ಷಿಪಣಿಗಳ ನಿರಂತರ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯದೊಂದಿಗೆ ಮಾತುಕತೆ ನಡೆಸಲು ಸೂಕ್ತ ಪರಿಸ್ಥಿತಿಯಲ್ಲಿ ಆ ದೇಶಕ್ಕೆ ಭೇಟಿ ನೀಡಲು ತಾನು ಸಿದ್ಧ ಎಂದು ದಕ್ಷಿಣ ಕೊರಿಯದ ನೂತನ ಅಧ್ಯಕ್ಷ ಮೂನ್ ಜೇ-ಇನ್ ಬುಧವಾರ ಹೇಳಿದ್ದಾರೆ.

ದಕ್ಷಿಣ ಕೊರಿಯದ ದಕ್ಷಿಣ ಭಾಗದಲ್ಲಿ ಅಮೆರಿಕದ ಸುಧಾರಿತ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿರುವ ವಿಷಯಕ್ಕೆ ಸಂಬಂಧಿಸಿ, ದೇಶದ ಪ್ರಮುಖ ಮಿತ್ರ ದೇಶ ಅಮೆರಿಕ ಹಾಗೂ ಪ್ರಮುಖ ವ್ಯಾಪಾರಿ ಪಾಲುದಾರ ದೇಶ ಚೀನಾದೊಂದಿಗೆ ತಾನು ‘ಪ್ರಾಮಾಣಿಕ ಮಾತುಕತೆ’ಗಳನ್ನು ನಡೆಸುವುದಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News