ಸಹಕಾರಿ ಸಂಘಕ್ಕೆ ವಂಚನೆ: ದೂರು
Update: 2017-05-10 22:02 IST
ಕಾರ್ಕಳ, ಮೇ 10: ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಣವನ್ನು ತನ್ನ ಸ್ವಂತ ಉಪಯೋಗಕ್ಕೆ ಪಡೆದು ವಂಚಿಸಿರುವ ಸಂಘದ ಬಜಗೋಳಿ ಶಾಖೆಯ ಪ್ರಬಂಧಕ ಮಂಜಲ್ತಾರು ನಿವಾಸಿ ಪುಷ್ಪರಾಜ್ ಶೆಟ್ಟಿ (45) ಎಂಬವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2002ರ ಮೇ 28ರಿಂದ 2016ರ ಮಾ.23ರವರೆಗೆ ಸಂಘದ ಬಜಗೋಳಿ ಶಾಖೆಯ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಈ ಅವಧಿಯಲ್ಲಿ ಸಂಘದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನ ಸ್ವಂತ ಉಪಯೋಗ ಕ್ಕಾಗಿ ಸುಮಾರು 2,87,78,812ರೂ. ಹಣವನ್ನು ವಿವಿಧ ರೂಪದಲ್ಲಿ ಬಳಸಿ ಕೊಂಡು ನಕಲಿ ದಾಖಲಾತಿಗಳನ್ನು ಸೃಷ್ಠಿಸಿ, ಬ್ಯಾಂಕಿನ ಪ್ರಮುಖ ಸುರಕ್ಷಾ ಕ್ರಮಗಳನ್ನು ಪೋರ್ಜರಿ ಮಾಡಿ ಗಣಕೀಕೃತ ಅಂಶಗಳನ್ನು ಅಳಿಸಿ ಹಾಕಿ ವಂಚನೆ ಮಾಡಿರುವುದಾಗಿ ಸಂಘದ ಪ್ರಬಂಧಕ ಜಯಕುಮಾರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.