ಮಹಿಳೆಯ ಕುತ್ತಿಗೆಯಿಂದ ಚಿನ್ನ ಕಸಿದು ಪರಾರಿ
ಮಂಗಳೂರು, ಮೇ 10: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮಹಿಳೆಯೋರ್ವರನ್ನು ದಾರಿ ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ 4 ಪವನ್ ಚಿನ್ನವನ್ನು ಕಸಿದು ಪರಾರಿಯಾಗಿರುವ ಘಟನೆ ಪೆರ್ಮುದೆ ಪಂಚಾಯತ್ ಬಳಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಪೆರ್ಮುದೆ ಕೋಡಿಯಾಣ ಹೌಸ್ ನಿವಾಸಿ ಐರಿನ್ ಡಿಕುನ್ಹ ಎಬವರು ಕೆಲಸದ ನಿಮಿತ್ತ ಹೊರ ಹೋಗಿದ್ದು, ಹಿಂದಿರುಗಿ ಬರುವಾಗ ಪೆರ್ಮುದೆ ಪಂಚಾಯತ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಸೂರಿಂಜೆ ಹೂಗುವ ದಾರಿಯ ಬಗ್ಗೆ ಕೇಳಿದ್ದಾರೆ. ಐರಿನ್ ಅವರಿಗೆ ದಾರಿ ತೋರಿಸಿದ್ದು, ಸ್ವಲ್ಪ ಮುಂದಕ್ಕೆ ಹೋದ ಈ ಅಪರಿಚಿತರು ಮತ್ತೆ ಹಿಂದಿರುಗಿ ಬಂದು ಮಹಿಳೆಯ ಕುತ್ತಿಗೆಯಿಂದ ಸರವನ್ನು ಎಳೆದು ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ಓರ್ವ ಹೆಲ್ಮನ್ ಧರಿಸಿದ್ದರೆ, ಮತ್ತೋರ್ವ ಟೋಪಿಯನ್ನು ಹಾಕಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಕಳವಾಗಿರುವ ಸರದ ಮೌಲ್ಯ 75,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.