‘ಅಮ್ಮ ಹಚ್ಚಿದ ಒಲೆ’ಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ

Update: 2017-05-10 17:55 GMT

ಮಂಗಳೂರು, ಮೇ 10: ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘ ನೀಡುವ 2015ನೆ ಸಾಲಿನ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಗೆ ಪತ್ರಕರ್ತ, ಕವಿ, ಕಥೆಗಾರ ಬಿ.ಎಂ.ಬಶೀರ್‌ರ ‘ಅಮ್ಮ ಹಚ್ಚಿದ ಒಲೆ’ ಕವನ ಸಂಕಲನ ಆಯ್ಕೆಯಾಗಿದೆ.
ವಾರ್ತಾಭಾರತಿ ದೈನಿಕದ ಸುದ್ದಿ ಸಂಪಾದಕರಾಗಿರುವ ಬಿ.ಎಂ.ಬಶೀರ್ ಸುಮಾರು 22 ವರ್ಷಗಳಿಂದ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ.

ಪ್ರವಾದಿಯ ಕನಸು(ಕವನ ಸಂಕಲನ), ಬಾಳೇಗಿಡ ಗೊನೆ ಹಾಕಿತು (ಕಥಾ ಸಂಕಲನ), ಅಂಗೈಯಲ್ಲೇ ಆಕಾಶ (ಹನಿ ಹನಿ ಕಥೆಗಳು), ಬಾಡೂಟದ ಜೊತೆ ಗಾಂಧೀ ಜಯಂತಿ (ಅಂಕಣ ಬರಹ), ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ -ಸೂಫಿಯ ಕಣ್ಣಲ್ಲಿ ಹನಿಗಳು (ಹನಿ ಕವಿತೆಗಳು), ಅಮ್ಮ ಹಚ್ಚಿದ ಒಲೆ (ಕವನ ಸಂಕಲನ) ಹಾಗೂ ಪರುಷಮಣಿ -ಬಿ.ಎಂ. ರಶೀದ್‌ರ ಸಮಗ್ರ ಬರಹಗಳು (ಸಂಪಾದನೆ) ಇವು ಬಶೀರ್‌ರ ಪ್ರಕಟಿತ ಕೃತಿಗಳು.

ತನ್ನ ಸಾಹಿತ್ಯ ಸೇವೆಗೆ ಮುದ್ದಣ ಕಾವ್ಯ ಪ್ರಶಸ್ತಿ, ಮೈಸೂರಿನ ಚದುರಂಗ ಪ್ರತಿಷ್ಠಾನ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ ಹಾಗೂ ಬನ್ನಂಜೆ ರಾಮಾಚಾರ್ಯ ಪತ್ರಿಕೋದ್ಯಮ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಬಶೀರ್ ಇರುವೆ ಪ್ರಕಾಶನದ ಸ್ಥಾಪಕರು.

ಮೇ 19ರಂದು ಸಂಜೆ 7:20ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ.10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News