×
Ad

ವೆನ್ಲಾಕ್‌ನ ಹಿರಿಯ ದಾದಿ ಹರಿಣಿಗೆ ‘ಫ್ಲಾರೆನ್ಸ್ ನೈಟಿಂಗೇಲ್’ ರಾಜ್ಯ ಪ್ರಶಸ್ತಿ

Update: 2017-05-10 23:59 IST

ಮಂಗಳೂರು, ಮೇ 10: ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದ ಹಿರಿಯ ದಾದಿ (ನರ್ಸ್)ಯಾಗಿರುವ ಹರಿಣಿ ಪಿ. ಪ್ರಸ್ತಕ ಸಾಲಿನ ರಾಜ್ಯಮಟ್ಟದ ‘ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. 58ರ ಹರೆಯದ ಮೂಲತಃ ಪುತ್ತೂರು ತಾಲೂಕಿನ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಹರಿಣಿ ಕಳೆದ 34 ವರ್ಷಗಳಿಂದ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನರ್ಸಿಂಗ್ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ನಡೆಸಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮೇ 12ರಂದು ವಿಧಾನಸೌಧದ ಸಭಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಪಿ.ಹರಿಣಿಯವರನ್ನು ‘ವಾರ್ತಾಭಾರತಿ’

 ಸಂಪರ್ಕಿಸಿದಾಗ ‘‘ಪ್ರಶಸ್ತಿಯ ಕುರಿತಂತೆ ಇ-ಮೇಲ್ ಮೂಲಕ ಸಂದೇಶ ಬಂದಿದೆ. ಇದು ನರ್ಸಿಂಗ್ ಸೇವಾ ವೃತ್ತಿಗೆ ದೊರಕುವ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ನನಗೆ ಈ ಪ್ರಶಸ್ತಿ ದೊರಕಿರುವುದರಿಂದ ನನ್ನ ಕರ್ತವ್ಯದ ಕುರಿತಾದ ನನ್ನ ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ’’ ಎಂದು ಸಂತಸ ಹಂಚಿಕೊಂಡಿದ್ದಾರೆ.

 ‘‘ನನ್ನ ವೃತ್ತಿ ಜೀವನದ 34 ವರ್ಷಗಳ ಅವಧಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಿರುವ ಸಮಾಧಾನ ನನಗಿದೆ. ಈ ವೃತ್ತಿಯಲ್ಲಿ ನಾನು ಪಡೆದುಕೊಂಡಿರುವ ತೃಪ್ತಿ ಹಾಗೂ ಸಮಾಧಾನ ಬೇರೆ ಯಾವ ಕ್ಷೇತ್ರಗಳಿಂದಲೂ ನಾನು ಪಡೆಯಲು ಅಸಾಧ್ಯ. ಕಾರಣ ಐದನೆ ತರಗತಿಯಲ್ಲಿರುವಾಗಲೇ ಫ್ಲಾರೆನ್ಸ್ ನೈಟಿಂಗೇಲ್ ಪಾಠದಿಂದ ಪ್ರೇರಿತಳಾಗಿ ನಾನೂ ನರ್ಸಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಬೇಕೆಂದು ನನ್ನ ಹೆತ್ತವರಲ್ಲಿ, ಶಿಕ್ಷಕರಲ್ಲಿ ಹೇಳಿಕೊಳ್ಳುತ್ತಿದ್ದೆ. ನಾನು ನರ್ಸಿಂಗ್ ಕ್ಷೇತ್ರವನ್ನು ಆಯ್ಕೆ ಮಾಡುವಲ್ಲಿ ನನ್ನ ತಾಯಿಯ ಪ್ರೋತ್ಸಾಹ ಮುಖ್ಯವಾಗಿದ್ದರೆ, ವಿವಾಹದ ಬಳಿಕ ನನ್ನ ಪತಿ ಹಾಗೂ ನನ್ನ ಮಕ್ಕಳು ಬೆಂಬಲಿಸಿದ್ದರ ಪರಿಣಾಮವಾಗಿ ನಾನು ನನ್ನ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗಿದೆ’’ ಎಂದು ಹರಿಣಿ ತಿಳಿಸಿದರು. ವೆನ್ಲಾಕ್ ಆಸ್ಪತ್ರೆಯಲ್ಲೇ ದಾದಿಯಾಗಿ ಸೇವೆ ಆರಂಭಿಸಿದ ಹರಿಣಿಯವರು ಬಳಿಕ ಸುಮಾರು 7 ವರ್ಷಗಳ ಕಾಲ ಕಾರ್ಕಳದ ಬೈಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಬಳಿಕ ಮತ್ತೆ ವೆನ್ಲಾಕ್ ಆಸ್ಪತ್ರೆಗೆ ನಿಯೋಜನೆಗೊಂಡು ಪ್ರಸ್ತುತ ವೆನ್ಲಾಕ್‌ನ ಮಕ್ಕಳ ವಿಭಾಗದಲ್ಲಿ ಹಿರಿಯ ದಾದಿಯಾಗಿ ಕರ್ತವ್ಯದಲ್ಲಿದ್ದಾರೆ.

2012ರ ಜನವರಿ 17ರಂದು ಚಿತ್ರದುರ್ಗದ ಹೊಸದುರ್ಗ ತಾಲೂಕಿನಲ್ಲಿ ಸಂಭವಿಸಿದ ದುರ್ಘಟನೆಯೊಂದರಲ್ಲಿ ಸುಟ್ಟ ಗಾಯಗಳೊಂದಿಗೆ ಜನವರಿ 21ರಂದು ವೆನ್ಲಾಕ್‌ನ ಮಕ್ಕಳ ವಿಭಾಗಕ್ಕೆ ದಾಖಲಾಗಿದ್ದ ಮನು (ಹೆಸರು ಬದಲಿಸಲಾಗಿದೆ) ಸುಮಾರು 6 ವರ್ಷ ಪ್ರಾಯದ ಬಾಲಕನನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ದುರ್ಘಟನೆಯಲ್ಲಿ ಹೆತ್ತವರನ್ನು ಕಳೆದುಕೊಂಡಿದ್ದ ಮನುವಿಗೆ ಆತನಿಗಿಂದ ಸುಮಾರು ಏಳೆಂಟು ವರ್ಷ ಹಿರಿಯನಾಗಿದ್ದ ಆತನ ಅಣ್ಣ ಅಭಿಯೇ ಆಸ್ಪತ್ರೆಯಲ್ಲಿ ಆರೈಕೆ ಮಾಡುತ್ತಿದ್ದ. ಈ ಸಂದರ್ಭ ತಂದೆ ತಾಯಿ ಇಲ್ಲದ ಈ ಇಬ್ಬರು ವೆನ್ಲಾಕ್ ಆಸ್ಪತ್ರೆಯ ದಾದಿಯರು ಅದರಲ್ಲೂ ಮುಖ್ಯವಾಗಿ ಹರಿಣಿ ಈ ಮಕ್ಕಳಿಗೆ ದಾದಿಗಿಂತಲೂ ಹೆಚ್ಚಾಗಿ ತಾಯಿಯ ವಾತ್ಸಲ್ಯವನ್ನು ಧಾರೆ ಎರೆದಿದ್ದರು. ಪುಟ್ಟ ಬಾಲಕನಾಗಿದ್ದ ಮನು ಹರಿಣಿಯವರನ್ನು ಅಮ್ಮ ಎಂದೇ ಕರೆಯುತ್ತಿದ್ದ. ಈ ಬಗ್ಗೆ ವಾರ್ತಾಭಾರತಿಯ 2013ರ ಸೆಪ್ಟಂಬರ್ 23ರ ಸಂಚಿಕೆಯಲ್ಲಿ ಪ್ರಕಟವಾದ ವಿಶೇಷ ಲೇಖನದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿತ್ತು.

  • ಸೇವಾ ಮನೋಭಾವದ ದಾದಿ

ರಿಣಿಯವರಿಗೆ ಪ್ರಶಸ್ತಿ ಬಂದಿರುವ ಬಗ್ಗೆ ಅಧಿಕೃತ ಮಾಹಿತಿ ತಮಗೆ ಬಂದಿಲ್ಲವಾದರೂ, ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದು ತಿಳಿದು ಬಂದಿದೆ. ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಆರಂಭದಿಂದಲೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಹಿರಿಯ ದಾದಿಯಾದ ಹರಿಣಿ ಅರ್ಹವಾಗಿಯೇ ಆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡಾ. ರಾಜೇಶ್ವರಿ ದೇವಿ ಅಧೀಕ್ಷಕಿ , ವೆನ್ಲಾಕ್‌ ಆಸ್ಪತ್ರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News