ಚಾಂಪಿಯನ್ಸ್ ಟ್ರೋಫಿ ಬಳಿಕ ಕೋಚ್ ಅನಿಲ್ ಕುಂಬ್ಳೆ ಭವಿಷ್ಯ ನಿರ್ಧಾರ
ಹೊಸದಿಲ್ಲಿ, ಮೇ 11: ಕಳೆದ ವರ್ಷ ಟೀಮ್ ಡೈರೆಕ್ಟರ್ ರವಿ ಶಾಸ್ತ್ರಿ ಅವರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾಗಿದ್ದ ಟೀಮ್ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಒಪ್ಪಂದದ ಕುರಿತು ಚಾಂಪಿಯನ್ಸ್ ಟ್ರೋಫಿಯ ಬಳಿಕ ಚರ್ಚೆಯಾಗುವ ಸಾಧ್ಯತೆಯಿದೆ.
ಕಳೆದ ವರ್ಷ ಭಾರತ ತಂಡ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಳ್ಳುವ ಮೊದಲು ಕುಂಬ್ಳೆ ಒಂದು ವರ್ಷದ ಅವಧಿಗೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದರು. ಅವರ ಒಪ್ಪಂದದ ಅವಧಿ ಈವರ್ಷದ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದೆ.
‘‘ಭಾರತದ ಚಾಂಪಿಯನ್ಸ್ ಟ್ರೋಫಿ ಅಭಿಯಾನದ ಅಂತ್ಯದೊಂದಿಗೆ ಕುಂಬ್ಳೆ ಅವರ ಕೋಚಿಂಗ್ ಒಪ್ಪಂದವೂ ಕೊನೆಯಾಗಲಿದೆ. ಕುಂಬ್ಳೆ ಅವರ ಒಪ್ಪಂದ ನವೀಕರಣವಾಗುವ ಎಲ್ಲ ಸಾಧ್ಯತೆಗಳಿವೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಕೊನೆಗೊಂಡ ಬಳಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಆಡಳಿತಾಧಿಕಾರಿಗಳ ಸಮಿತಿಯು ಬಿಸಿಸಿಐ ಕಾರ್ಯಚಟುವಟಿಕೆಯನ್ನು ನೋಡಿಕೊಳ್ಳುತ್ತಿದೆ. ಪ್ರತಿಯೊಂದು ವಿಷಯವನ್ನು ಸಮಿತಿಯೇ ಅಂತಿಮಗೊಳಿಸಬೇಕಾಗಿದೆ. ಅನಿಲ್ ಕುಂಬ್ಳೆ ಕುರಿತು ತೆಗೆದುಕೊಳ್ಳುವ ನಿರ್ಧಾರವನ್ನು ಸಿಒಎ ಅಂತಿಮಗೊಳಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಕುಂಬ್ಳೆ ಕೋಚ್ ಆದ ಬಳಿಕ ಭಾರತ ಕ್ರಿಕೆಟ್ ತಂಡ ಸತತ ಐದು ಟೆಸ್ಟ್ ಸರಣಿಗಳನ್ನು ಜಯಿಸಿದೆ. 2016-17ರಲ್ಲಿ ಭಾರತ 17 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಕುಂಬ್ಳೆ ಮಾರ್ಗದರ್ಶನದಲ್ಲಿ 12 ಪಂದ್ಯಗಳನ್ನು ಜಯಿಸಿತ್ತು.
ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಭಾರತದಲ್ಲಿ ಎರಡು ಏಕದಿನ ಸರಣಿಯನ್ನು ಆಡಲಾಗಿದ್ದು, ಆತಿಥೇಯ ನ್ಯೂಝಿಲೆಂಡ್ ವಿರುದ್ಧ 3-2 ಹಾಗೂ ಇಂಗ್ಲೆಂಡ್ ವಿರುದ್ಧ 2-1 ರಿಂದ ಜಯ ಸಾಧಿಸಿತ್ತು. ಕುಂಬ್ಳೆ ಕೋಚ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.